
ಉದಯಪುರ: ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ವಿವಾಹದ ಸಿದ್ಧತೆಗಳು ರಾಜಸ್ಥಾನದ ಅರಮನೆ ನಗರಿ ಉದಯಪುರದಲ್ಲಿ ಅದ್ದೂರಿಯಾಗಿ ನಡೆಯುತ್ತಿವೆ. ಆದರೆ, ಈ ಸ್ಟಾರ್ ಜೋಡಿಯ ಮದುವೆಗೆ ಆಗಮಿಸುವ ಅತಿಥಿಗಳಿಗೆ ಈಗಿನಿಂದಲೇ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ ಎಂಬ ಸುದ್ದಿ ಎಲ್ಲಡೆ ಸದ್ದು ಮಾಡುತ್ತಿದೆ.
ಫೆಬ್ರವರಿ 26ಕ್ಕೆ ಶುಭ ಮುಹೂರ್ತ ಹಲವು ದಿನಗಳ ಗುಸುಗುಸು ಸುದ್ದಿಗೆ ತೆರೆ ಎಳೆದಿರುವ ಈ ಜೋಡಿ, ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಮದುವೆಯ ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಯ ನಂತರ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಭವ್ಯವಾದ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸೆಲ್ಫಿ ಇಲ್ಲ, ಕ್ಯಾಮೆರಾ ಬಳಸುವಂತಿಲ್ಲ! ಮದುವೆಯ ಯಾವುದೇ ಖಾಸಗಿ ಕ್ಷಣಗಳು ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಅತಿಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
- ನೋ ಮೊಬೈಲ್ ಪಾಲಿಸಿ: ಮದುವೆ ಮಂಟಪಕ್ಕೆ ಬರುವ ಅತಿಥಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಹೊರಗಡೆಯೇ ಇರಿಸಬೇಕಾಗುತ್ತದೆ.
- ವಿಶೇಷ ತಪಾಸಣೆ: ಮೊಬೈಲ್ ಬಳಕೆ ತಡೆಯಲು ಮದುವೆ ನಡೆಯುವ ಸ್ಥಳದಲ್ಲಿ ವಿಶೇಷ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.
- ಒಪ್ಪಂದಕ್ಕೆ ಸಹಿ: ಅಧಿಕೃತವಾಗಿ ಫೋಟೋ ತೆಗೆಯುವ ತಂಡದ ಜೊತೆ ಈಗಾಗಲೇ ‘ಗೌಪ್ಯತೆ ಒಪ್ಪಂದ’ (Non-Disclosure Agreement) ಮಾಡಿಕೊಳ್ಳಲಾಗಿದ್ದು, ಯಾವುದೇ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ತಾಕೀತು ಮಾಡಲಾಗಿದೆ.
ಚಿತ್ರರಂಗದ ಗಣ್ಯರಿಗೆ ಆರತಕ್ಷತೆಯಲ್ಲಷ್ಟೇ ಆಹ್ವಾನ ಉದಯಪುರದ ಮದುವೆಗೆ ಕೇವಲ ಕುಟುಂಬದವರು ಮತ್ತು ಅತ್ಯಂತ ಆಪ್ತ ಗೆಳೆಯರಿಗಷ್ಟೇ ಮಿತಿಗೊಳಿಸಲಾಗಿದೆ. ಸಿನಿಮಾರಂಗದ ತನ್ನ ಸಹೋದ್ಯೋಗಿಗಳು ಮತ್ತು ಗಣ್ಯರಿಗಾಗಿ ಹೈದರಾಬಾದ್‌ನಲ್ಲಿ ಅದ್ಧೂರಿ ಔತಣಕೂಟ ಏರ್ಪಡಿಸಲಾಗುತ್ತಿದೆ. ಈ ಹಿಂದೆ ಬಾಲಿವುಡ್‌ನ ಕತ್ರಿನಾ ಕೈಫ್ ಹಾಗೂ ಕಿಯಾರಾ ಅಡ್ವಾಣಿ ಪಾಲಿಸಿದ ‘ಸೀಕ್ರೆಟ್ ವೆಡ್ಡಿಂಗ್’ ಮಾದರಿಯನ್ನೇ ಈಗ ವಿಜಯ್-ರಶ್ಮಿಕಾ ಜೋಡಿ ಕೂಡ ಅನುಸರಿಸುತ್ತಿದೆ.
































