
ಉತ್ತರ ಪ್ರದೇಶ : ವಾರಣಾಸಿಯ ಪವಿತ್ರ ಗಂಗಾನದಿಯಲ್ಲಿ ದೋಣಿ ವಿಹಾರದ ವೇಳೆ ಇಫ್ತಾರ್ ಕೂಟ ಆಯೋಜಿಸಿ, ಮಾಂಸಾಹಾರಿ ಆಹಾರದ ತ್ಯಾಜ್ಯವನ್ನು ನದಿಗೆ ಎಸೆದ 14 ಮಂದಿಯ ಗುಂಪನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ವಾರಣಾಸಿ ನ್ಯಾಯಾಲಯವು ಇವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳವಾರ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ದೋಣಿಯ ಮಧ್ಯೆ ಕುಳಿತು ಚಿಕನ್ ಬಿರಿಯಾನಿ ಸೇವಿಸಿದ ತಂಡವು, ಅದರ ಮೂಳೆ ಮತ್ತು ಉಳಿದ ಆಹಾರ ತ್ಯಾಜ್ಯವನ್ನು ನೇರವಾಗಿ ಗಂಗಾನದಿಗೆ ಎಸೆದಿರುವುದು ಕಂಡುಬಂದಿದೆ. ಸನಾತನ ಧರ್ಮದ ಅತೀ ಪವಿತ್ರ ನದಿಯೆಂದು ಪೂಜಿಸಲ್ಪಡುವ ಗಂಗೆಯನ್ನು ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಜತ್ ಜೈಸ್ವಾಲ್ ಅವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮಾರ್ಚ್ 17 ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಇವರನ್ನು ಏಪ್ರಿಲ್ 1, 2026 ರವರೆಗೆ ಜೈಲಿಗೆ ಕಳುಹಿಸಲಾಗಿದೆ. ಬಿಎನ್ಎಸ್ ಸೆಕ್ಷನ್ 298, 299 ಸೇರಿದಂತೆ ವಿವಿಧ ಕಠಿಣ ಕಾನೂನುಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮಾರ್ಚ್ 23 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.



































