
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನಲ್ಲಿ ಈ ಕೃತ್ಯ ನಡೆದಿದ್ದು, ಸುಮಾರು ₹5 ಲಕ್ಷ ಮೌಲ್ಯದ ಕಾರು ಬೆಂಕಿಗೆ ಆಹುತಿಯಾಗಿದೆ. ಕಾರಿನ ಮಾಲೀಕ ಶೇಖ್ ಮೊಹಮ್ಮದ್ ಗೌಸ್ ಕುಟುಂಬವು ಅಕ್ಟೋಬರ್ 1ರಂದು ಹೈದರಾಬಾದ್‌ಗೆ ಪ್ರವಾಸಕ್ಕೆ ಹೋಗಿದ್ದರು.
ಘಟನೆಯ ಹಿನ್ನೆಲೆ
ಮೊಹಮ್ಮದ್ ಗೌಸ್ ಅವರು ಪ್ರವಾಸಕ್ಕೆ ಹೋಗುವ 10 ದಿನಗಳ ಮೊದಲು ಈ ಹೊಸ ಸ್ವಿಫ್ಟ್ ಕಾರನ್ನು ಖರೀದಿಸಿದ್ದರು. ಆದರೆ, ಇತ್ತೀಚೆಗೆ ಮನೆಗೆ ಹೋಗುವ ರಸ್ತೆಯಲ್ಲಿ ಸಮಸ್ಯೆ ಇದ್ದುದರಿಂದ, ಕಾರನ್ನು ಕಾವ್ರಾಡಿಯ ನೂರಾನಿ ಮಸೀದಿ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು ಎನ್ನಲಾಗಿದೆ.
ಅಕ್ಟೋಬರ್ 4ರಂದು ಬೆಳಿಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ಮೊಹಮ್ಮದ್ ಗೌಸ್ ಅವರ ಸಹೋದರ ಶೇಕ್ ಅನ್ಸಾರ್ ಸಾಹೇಬ್ ಅವರು ನಮಾಜಿಗೆ ಎದ್ದು ಬರುವಾಗ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವುದು ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಶೇಖ್ ಮೊಹಮ್ಮದ್ ಗೌಸ್ ಅವರ ಕುಟುಂಬಕ್ಕೆ ಆರ್ಥಿಕವಾಗಿ ನಷ್ಟ ಉಂಟು ಮಾಡುವ ಉದ್ದೇಶದಿಂದಲೇ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



































