

ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗರಡಿಮಜಲು ಎಂಬಲ್ಲಿ ಆಭರಣ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದ ರಮೇಶ್ ಶೇರಿಗಾರ್ (38) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಎರಡು ದಿನಗಳ ಹಿಂದೆ ರಮೇಶ್ ಶೇರಿಗಾರ್ ನಾಪತ್ತೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು ಮತ್ತು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಕೊನೆಗೆ ಶವವು ಬಾವಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾನೂನು ಪ್ರಕ್ರಿಯೆ ಕೈಗೊಂಡಿರುತ್ತಾರೆ. ಕೊಳೆಯಲು ಪ್ರಾರಂಭಿಸಿದ್ದ ಶವವನ್ನು ಸ್ಥಳೀಯ ಸಮಾಜಸೇವಕರಾದ ನಿತ್ಯಾನಂದ ಒಳಕಾಡು ಮತ್ತು ಈಶ್ವರ್ ಮಲ್ಪೆ ಬಾವಿಯಿಂದ ಹೊರತೆಗೆದಿದ್ದಾರೆ.
ಶವವನ್ನು ತಕ್ಷಣವೇ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಸಂಬಂಧ ಇನ್ನಷ್ಟು ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.