
ಉಡುಪಿ: ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ, ಗೀತಾ ಪರಿವಾರದ ಪ್ರಮುಖರು ಹಾಗೂ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕೋಶಾಧ್ಯಕ್ಷರಾದ ಶ್ರೀ ಗೋವಿಂದ ಗಿರಿ ಮಹಾರಾಜ್ ಅವರು ಆಗಸ್ಟ್ 15ರಂದು ಉಡುಪಿಗೆ ಭೇಟಿ ನೀಡಲಿದ್ದಾರೆ. ಅವರು ಮಥುರಾ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಅಂಗವಾಗಿ, ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಿರ್ಮಿಸಲಾದ ‘ಸುವರ್ಣ ಪಥ’ವನ್ನು ಶ್ರೀ ಗೋವಿಂದ ಗಿರಿ ಮಹಾರಾಜ್ ಅವರು ಆಗಸ್ಟ್ 15ರಂದು, ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ, ಅಪರಾಹ್ನ 4 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.
ನಂತರ, ರಾಜಾಂಗಣದಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಹಾಗೂ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ, ಹಾಗೂ ಉದ್ಯಮಿ ಭುವನೇಂದ್ರ ಕಿದಿಯೂರು ಆಗಮಿಸಲಿದ್ದಾರೆ.
ಇದೇ ದಿನ ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ, ಶ್ರೀಕೃಷ್ಣ ನಾಮೋತ್ಸವ, ವಿದ್ವತ್ ಗೋಷ್ಟಿ, ಮತ್ತು ನಿವೃತ್ತ ಸೇನಾನಿಗಳಿಂದ ಪಥಸಂಚಲನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತು ಮಠದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನಾಚಾರ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.