
ಉಡುಪಿ: ಜಿಲ್ಲೆಯ ಪ್ರಕೃತಿ ಪ್ರೇಮಿಗಳು ಮತ್ತು ಸಾರ್ವಜನಿಕರಿಗಾಗಿ ಗಣರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ವಿಶೇಷ ‘ಫಲಪುಷ್ಪ ಪ್ರದರ್ಶನ-2026’ ಆಯೋಜನೆಗೊಂಡಿದೆ. ಈ ಬಾರಿಯ ಪ್ರದರ್ಶನವು ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ಜೀವನಗಾಥೆ ಮತ್ತು ಪರಿಸರ ಕಾಳಜಿಯ ಪರಿಕಲ್ಪನೆಯನ್ನು ಆಧರಿಸಿರುವುದು ವಿಶೇಷವಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ಜನವರಿ 26 ರಿಂದ 28 ರವರೆಗೆ ನಗರದ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಈ ಬೃಹತ್ ಪ್ರದರ್ಶನ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜನವರಿ 26 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಮೇಳದಲ್ಲಿ ಪ್ರಮುಖವಾಗಿ 26 ವಿವಿಧ ತಳಿಗಳ ಸುಮಾರು 7000 ಕ್ಕೂ ಹೆಚ್ಚು ಪುಷ್ಪ ಗಿಡಗಳನ್ನು ಪ್ರದರ್ಶಿಸಲಾಗುತ್ತಿದೆ. ಪೆಟೂನಿಯ, ಸೆಲೋಷಿಯಾ, ಸೇವಂತಿಗೆ, ಗುಲಾಬಿ, ಮತ್ತು ಚೈನಾ ಅಸ್ಟರ್ ಸೇರಿದಂತೆ ಮನಮೋಹಕ ಹೂವುಗಳ ವಿನ್ಯಾಸ ಇಲ್ಲಿರಲಿದೆ. ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಬಿಂಬಿಸುವ ಹೂವಿನ ಕಲಾಕೃತಿಗಳು, ತೆಂಗಿನ ಗರಿಯ ಜಾನೂರ್ ಆರ್ಟ್, ಮತ್ತು ಮಕ್ಕಳಿಗಾಗಿ ಡೊರೆಮಾನ್ ಹಾಗೂ ಮಶ್ರೂಮ್ ಮಾದರಿಗಳು ಆಕರ್ಷಣೀಯವಾಗಿರಲಿವೆ. ಕೃಷಿ ಆಸಕ್ತರಿಗಾಗಿ ಮೈಕ್ರೋ-ಗ್ರೀನ್ಸ್ ಪ್ರಾತ್ಯಕ್ಷತೆ ಮತ್ತು ಕೃಷಿ ಯಂತ್ರೋಪಕರಣಗಳ ಮಳಿಗೆಗಳೂ ಇರಲಿವೆ. ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.



































