
ಕಾರ್ಕಳ: “ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನಲ್ಲಿ ಈಗ ನಡೆಯುತ್ತಿರುವ ಬಿಡಿಭಾಗಗಳ ಕಳ್ಳತನಕ್ಕೆ ಈ ಹಿಂದೆ ಶಾಸಕ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ನಡೆದ ಪ್ರತಿಮೆಯ ಮೇಲ್ಭಾಗದ ಕಳ್ಳತನವೇ ಪ್ರೇರಣೆ” ಎಂದು ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ನೇರ ಆರೋಪ ಮಾಡಿದ್ದಾರೆ.
ಥೀಮ್ ಪಾರ್ಕಿನಲ್ಲಿ ಎರಡನೇ ಬಾರಿ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ಅವರ ವಿರುದ್ಧ ಹರಿಹಾಯ್ದಿರುವ ಅವರು, ಈ ದುಸ್ಥಿತಿಗೆ ಶಾಸಕರೇ ನೇರ ಹೊಣೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯ ಶೆಟ್ಟಿ ಮುನಿಯಾಲು ಅವರ ಪ್ರಮುಖ ಆರೋಪಗಳು:
- ನಕಲಿ ಪ್ರತಿಮೆ ಮತ್ತು ಮೊದಲ ‘ಕಳ್ಳತನ’: ಕಂಚಿನ ಬದಲು ಫೈಬರ್ ಮಿಶ್ರಿತ ನಕಲಿ ಪ್ರತಿಮೆ ನಿರ್ಮಿಸಿ ಜನತೆಗೆ ಮೋಸ ಮಾಡಲಾಗಿದೆ. ಈ ಹಿಂದೆ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಗುಟ್ಟಾಗಿ ತೆಗೆದು ಸಾಗಿಸಲಾಗಿತ್ತು. ಅದು ಒಂದು ರೀತಿಯ ಕಳ್ಳತನವೇ ಆಗಿತ್ತು. ಅಂದು ಶಾಸಕರು ಈ ಬಗ್ಗೆ ಮೌನ ವಹಿಸಿದ್ದು, ಅದು ಅವರದ್ದೇ ನಿರ್ದೇಶನದಂತೆ ನಡೆದಿದೆ ಎಂಬುದಕ್ಕೆ ಸಾಕ್ಷಿ.
- ಎರಡನೇ ಬಾರಿ ಕಳ್ಳತನಕ್ಕೆ ಪ್ರೋತ್ಸಾಹ: ಮೊದಲ ಬಾರಿ ಪ್ರತಿಮೆಯ ಭಾಗಗಳನ್ನು ಕಳ್ಳತನ ಮಾಡಿದಾಗ ಶಾಸಕರು ಮೌನವಾಗಿದ್ದೇ ಈಗ ಉಳಿದ ಬಿಡಿಭಾಗಗಳನ್ನು ಕಳ್ಳರು ಎಗರಿಸಲು ಪ್ರೇರಣೆಯಾಗಿದೆ.
- ಧಾರ್ಮಿಕ ನಂಬಿಕೆಗೆ ಮೋಸ: ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನ ಬಳಸಿ ನಕಲಿ ಪ್ರತಿಮೆ ನಿರ್ಮಿಸುವ ಮೂಲಕ ಜನರಿಗೆ, ಸರ್ಕಾರಕ್ಕೆ ಮತ್ತು ಧಾರ್ಮಿಕ ನಂಬಿಕೆಗೆ ದ್ರೋಹ ಎಸಗಲಾಗಿದೆ. ಇದರಿಂದಾಗಿ ಕಾರ್ಕಳದ ಸುಂದರ ಪ್ರವಾಸೋದ್ಯಮದ ಕನಸು ನುಚ್ಚುನೂರಾಗಿದೆ.
- ಶಾಸಕರ ವಿರುದ್ಧ ವಾಗ್ದಾಳಿ: ಸುನೀಲ್ ಕುಮಾರ್ ಒಬ್ಬ “ಸಮಯ ಸಾಧಕ ಮತ್ತು ಸ್ವಾರ್ಥಿ”. ಕೇವಲ ಚುನಾವಣೆಗಾಗಿ ಹಿಂದೂ ಧರ್ಮಕ್ಕೂ, ಜನರಿಗೂ ಮೋಸ ಮಾಡುವ ನೀಚ ಮನಸ್ಥಿತಿ ಅವರಿಗಿದೆ. ಕಾರ್ಕಳದ ಇಂದಿನ ಈ ದುರ್ಗತಿಗೆ ಅವರೇ ಕಾರಣವಾಗಿದ್ದು, ಕೂಡಲೇ ಜನತೆಯ ಕ್ಷಮೆ ಯಾಚಿಸಬೇಕು.
ಆಗ್ರಹ:
ಸರ್ಕಾರದ ಸ್ವತ್ತನ್ನು ಕಳವು ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಥೀಮ್ ಪಾರ್ಕ್ ರಕ್ಷಿಸಲು ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮುನಿಯಾಲು ಆಗ್ರಹಿಸಿದ್ದಾರೆ.



































