
ತುಮಕೂರು: ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ತುಮಕೂರಿನಲ್ಲಿ ನಿವೃತ್ತ ರೇಷ್ಮೆ ಇಲಾಖೆ ನೌಕರರೊಬ್ಬರು ಇದಕ್ಕೆ ಬಲಿಯಾಗಿದ್ದಾರೆ. ಯಾವುದೇ ಒಟಿಪಿ (OTP) ಹೇಳದಿದ್ದರೂ, ಅಥವಾ ಯಾರೊಂದಿಗೂ ಬ್ಯಾಂಕ್ ಖಾತೆಯ ವಿವರ ಹಂಚಿಕೊಳ್ಳದಿದ್ದರೂ, ಅವರ ಖಾತೆಯಿಂದ ಬರೋಬ್ಬರಿ ₹17 ಲಕ್ಷ ಹಣ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ.
ಸೈಬರ್ ವಂಚನೆಗೊಳಗಾದ ನಿವೃತ್ತ ನೌಕರನ ಹೆಸರು ಸಿ.ಇ. ನಾಗರಾಜು. ಜುಲೈ 31ರ ಮಧ್ಯರಾತ್ರಿ 12.17ರಿಂದ 1 ಗಂಟೆಯವರೆಗೆ ಅವರ ಮೊಬೈಲ್‌ಗೆ ಹಣ ವರ್ಗಾವಣೆಯ ಕುರಿತು ನಿರಂತರವಾಗಿ ಮೆಸೇಜ್‌ಗಳು ಬರಲಾರಂಭಿಸಿವೆ. ನಿದ್ದೆಯಿಂದ ಎಚ್ಚರಗೊಂಡು ಮೊಬೈಲ್ ಪರಿಶೀಲಿಸಿದಾಗ, ತಮ್ಮ ಖಾತೆಯಿಂದ ದೊಡ್ಡ ಮೊತ್ತದ ಹಣ ಮಾಯವಾಗಿರುವುದು ಅವರ ಗಮನಕ್ಕೆ ಬಂದಿದೆ.
ವಂಚಕರು ನಾಗರಾಜು ಅವರ ಖಾತೆಯಿಂದ ₹5 ಲಕ್ಷ, ₹50 ಸಾವಿರ, ₹98 ಸಾವಿರ ಹೀಗೆ ಸುಮಾರು 6 ಬಾರಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ತಕ್ಷಣವೇ ಬ್ಯಾಂಕಿನ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ಪಡೆದ ನಾಗರಾಜು, ವಂಚಕರನ್ನು ಪತ್ತೆ ಹಚ್ಚಿ, ಹಣ ವಾಪಸ್ ಕೊಡಿಸುವಂತೆ ಕೋರಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಲಿಂಕ್ ಕಳುಹಿಸಿ ವಂಚಿಸುವುದು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸುವುದು, ಪಾರ್ಟ್ ಟೈಮ್ ಕೆಲಸದ ಆಮಿಷವೊಡ್ಡುವಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದವು. ಆದರೆ ಈಗ ಯಾವುದೇ ಒಟಿಪಿ ಬರದಿದ್ದರೂ ಅಥವಾ ಅದನ್ನು ಹಂಚಿಕೊಳ್ಳದಿದ್ದರೂ ಹಣ ಕಡಿತಗೊಳ್ಳುತ್ತಿರುವ ಈ ಹೊಸ ಮಾದರಿಯ ವಂಚನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.