
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಭಕ್ತರಿಗೆ ನೀಡುವ ಉಚಿತ ಅನ್ನ ಪ್ರಸಾದದಲ್ಲಿ ಹೊಸ ಐಟಂ ಸೇರಿದೆ. ಗುರುವಾರದಿಂದ ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದಂ ಭವನದಲ್ಲಿ ಮಸಾಲಾ ವಡಾ ಸಹ ಭಕ್ತರಿಗೆ ಪೂರೈಸಲಾಗುತ್ತಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ಅಧಿಕಾರಿಗಳು ಅಧಿಕೃತವಾಗಿ ಈ ಸೇವೆಗೆ ಚಾಲನೆ ನೀಡಿದ್ದು, ಬೆಳಗ್ಗೆ 10:30ರಿಂದ ಸಂಜೆ 4ರವರೆಗೆ ದಿನವೂ 35,000 ಮಸಾಲಾ ವಡೆಗಳನ್ನು ಭಕ್ತರಿಗೆ ವಿತರಿಸಲಾಗುವುದು. ಭವಿಷ್ಯದಲ್ಲಿ ಇದರ ಪ್ರಮಾಣವನ್ನು ಹೆಚ್ಚಿಸುವ ಯೋಜನೆಯೂ ಇದೆ.
ಈ ಹೊಸ ಸೇರ್ಪಡೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅನುಮೋದನೆ ನೀಡಿದ್ದು, ಭಕ್ತರಿಗೆ ಇನ್ನಷ್ಟು ವೈವಿಧ್ಯಮಯ ಅನ್ನ ಪ್ರಸಾದ ಒದಗಿಸಲು ಪ್ರಯತ್ನಿಸಲಾಗುತ್ತಿದೆ. 1985ರಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಪ್ರಾರಂಭಿಸಿದ ನಿತ್ಯ ಅನ್ನದಾನ ದತ್ತಿ ಯೋಜನೆ ಇದೀಗ ಶ್ರೀ ವೆಂಕಟೇಶ್ವರ ಅನ್ನ ಪ್ರಸಾದಂ ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಕ್ತರ ದೇಣಿಗೆ ಮತ್ತು ಬ್ಯಾಂಕ್ ಬಡ್ಡಿಯ ನೆರವಿನಿಂದ ಉಚಿತ ಅನ್ನದಾನ ಸೇವೆ ನಿರ್ವಹಿಸಲಾಗುತ್ತಿದೆ.
ಪ್ರತಿ ವರ್ಷ ಹೊಸ ವರ್ಷ, ವೈಕುಂಠ ಏಕಾದಶಿ, ರಥಸಪ್ತಮಿ, ಗರುಡ ಸೇವೆ ಮುಂತಾದ ಶುಭ ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಉಚಿತ ಊಟ ವ್ಯವಸ್ಥೆ ಕಲ್ಪಿಸಲಾಗುತ್ತದೆ.