
ಅಮರಾವತಿ: ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆಗೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಟೆಂಡರ್ ಪಡೆಯುವ ಹಂತದಿಂದ ಪೂರೈಕೆಯ ತನಕ ನಿಯಮ ಉಲ್ಲಂಘನೆಯ ಆರೋಪದಡಿ ಈ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳು ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್, ಫೊಮಿಲ್ ಜೈನ್, ಪೂನಂಬಾಕ್ಕಂನ ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಯಾ, ದುಂಡಿಗಲ್‌ನ ಎ ಆರ್ ಡೈರಿ ಎಂ.ಡಿ ರಾಜಶೇಖರನ್ ಎಂದು ಗುರುತಿಸಲಾಗಿದೆ.
ವೈಷ್ಣವಿ ಡೈರಿ, ಎ ಆರ್ ಡೈರಿ ಹೆಸರಿನಲ್ಲಿ ಸುಳ್ಳು ದಾಖಲೆಗಳು ಮತ್ತು ಸೀಲುಗಳನ್ನು ಬಳಸಿ ಟೆಂಡರ್ ಪಡೆದಿದ್ದು, ನಕಲಿ ದಾಖಲೆಗಳ ಮೂಲಕ ತುಪ್ಪ ಪೂರೈಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ತನಿಖೆಯಲ್ಲಿ ದಾಖಲೆ ತಿರುವು, ಭ್ರಷ್ಟಾಚಾರ ಮತ್ತು ನಿಯಮ ಉಲ್ಲಂಘನೆ ಬೆಳಕಿಗೆ ಬಂದಿವೆ.