
ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡು ಹಾರಿಸಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಜ.17ರ ಶುಕ್ರವಾರ ತಡರಾತ್ರಿ ನಡೆದಿದೆ.
ಮೃತರನ್ನು ರಾಮಚಂದ್ರಗೌಡ ಅಲಿಯಾಸ್ ಚಂದ್ರು (54) ಎಂದು ಗುರುತಿಸಲಾಗಿದೆ. ರೈತನಾಗಿರುವ ಈತ ತನ್ನ ಪತ್ನಿ ವಿನೋದ(43)ರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೃತ್ಯಕ್ಕೆ ರಾಮಚಂದ್ರ ಸ್ವಂತ ಪರವಾನಿಗೆ ಪಡೆದ ಕೋವಿಯನ್ನು ಬಳಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ:
ರಾಮಚಂದ್ರಗೌಡ ಕುಡಿದು ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾರೆ. ಜಗಳ ತೀವ್ರವಾಗುತ್ತಿದ್ದಂತೆ ಪತ್ನಿ ಹಾಗೂ ಮಗನ ಜೊತೆಗಿನ ವಾಗ್ವಾದ ಅವಾಚ್ಯ ಶಬ್ದಗಳಿಗೆ ತಿರುಗಿತ್ತು.
ಹೊಡೆದಾಟದ ವೇಳೆ ರಾಮಚಂದ್ರ ಅವರು ತಮ್ಮ ಮಗ ಪ್ರಶಾಂತ್‌ನತ್ತ ಕೋವಿಯನ್ನು ಗುರಿಯಾಗಿಸಿಕೊಂಡಾಗ, ಅವರ ಪತ್ನಿ ವಿನೋದ ಅದನ್ನು ತಪ್ಪಿಸಲು ಪ್ರಯತ್ನಿಸಿದರು. ಈ ವೇಳೆ ರಾಮಚಂದ್ರ ತನ್ನ ಪತ್ನಿಯತ್ತ ಗುಂಡು ಹಾರಿಸಿದ್ದು, ವಿನೋದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪತ್ನಿ ತೀರಿಕೊಂಡ ನಂತರ ರಾಮಚಂದ್ರ ರಬ್ಬರ್ ಶೀಟ್ ತಯಾರಿಕೆಗೆ ಬಳಸುವ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ:
ಪುತ್ರ ಪ್ರಶಾಂತ್ ನೀಡಿದ ಹೇಳಿಕೆ ಮೇರೆಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂತ್ಯಕ್ರಿಯೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.