
ಬೆಂಗಳೂರು: ಧರ್ಮಸ್ಥಳದ ಪ್ರಕರಣದಲ್ಲಿ ದೂರು ನೀಡಿ ಬಳಿಕ ವಿವಾದಕ್ಕೆ ಸಿಲುಕಿದ್ದ ಸುಜಾತಾ ಭಟ್ ಅವರು ಇದೀಗ ತಮ್ಮ ನಡೆಯ ಬಗ್ಗೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.
“ಎಲ್ಲ ವಿಚಾರದಲ್ಲೂ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಧರ್ಮಸ್ಥಳಕ್ಕೆ ಹೋಗುತ್ತೇನೆ. ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ದೇವರಿಗೆ ನಮಸ್ಕಾರ ಮಾಡಿ ಬರುತ್ತೇನೆ. ವೀರೇಂದ್ರ ಹೆಗ್ಗಡೆ ಅವರಲ್ಲೂ ಕ್ಷಮೆ ಕೇಳಿ ದೀರ್ಘದಂಡ ನಮಸ್ಕಾರ ಮಾಡಬೇಕು ಎನಿಸಿದೆ. ಸದ್ಯದಲ್ಲೇ ಹೋಗುತ್ತೇನೆ,” ಎಂದು ಸುಜಾತಾ ಭಟ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಬುರುಡೆ ಗ್ಯಾಂಗ್ ಮತ್ತು ಅನನ್ಯಾ ಭಟ್ ಪಾತ್ರದ ಸೃಷ್ಟಿ
ತಮ್ಮ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಈ ಹಿಂದೆ ದೂರು ನೀಡಿದ್ದ ಸುಜಾತಾ ಭಟ್, ಇದೀಗ ಆಕೆ ನನ್ನ ಮಗಳೇ ಅಲ್ಲ. ಅನನ್ಯಾ ಭಟ್ ಎನ್ನುವ ಪಾತ್ರವನ್ನು ಸೃಷ್ಟಿಸಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಅವರು, “ನನ್ನನ್ನು ಬುರುಡೆ ಗ್ಯಾಂಗ್ ಜತೆ ಸೇರಿಸಬೇಡಿ. ಅದಕ್ಕೂ ನನಗೂ ಸಂಬಂಧ ಇಲ್ಲ. ನನ್ನ ವಿಚಾರವೇ ಬೇರೆ. ನನಗೆ ಶಿವಶಂಕರ್ ಎಂಬುವರಿಂದ ಆಸ್ತಿ ವಿಚಾರದಲ್ಲಿ ಅನ್ಯಾಯ ಆಗಿತ್ತು. ಅವರು ಅನನ್ಯಾ ಭಟ್ ಪಾತ್ರ ಸೃಷ್ಟಿಸಿದ್ದು. ಆ ಆಸ್ತಿ ವಿಚಾರವನ್ನೂ ಬಿಟ್ಟು ಬಿಟ್ಟಿದ್ದೇನೆ. ಸಾಯುವಾಗ ಏನನ್ನೂ ಒಯ್ಯುವುದಿಲ್ಲ. ಇದೆಲ್ಲಾ ಏಕೆ ಎನ್ನಿಸಿದೆ. ಎಲ್ಲವೂ ಮುಗಿದಿದೆ. ನಾನು ಯಾವ ಗ್ಯಾಂಗ್ ಜತೆಗೂ ಇಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ದೂರು ಕೊಟ್ಟು ತಪ್ಪು ಮಾಡಿದೆ: ಸುಜಾತಾ ಭಟ್
“ನನಗೆ ವಯಸ್ಸಾಗಿದೆ. ಓಡಾಡುವ ಶಕ್ತಿಯೂ ಇಲ್ಲ. ಯಾರ ಬೆಂಬಲವೂ ನನಗಿಲ್ಲ. ನಾನು ಎಡವಿದ್ದೇನೆ. ನನ್ನನ್ನು ನಾನು ಸರಿಪಡಿಸಿಕೊಳ್ಳಬೇಕಿದೆ. ದೂರು ಕೊಟ್ಟು ತಪ್ಪು ಮಾಡಿದೆ. ನನಗಿದು ಬೇಡವಾಗಿತ್ತು. ತುಂಬಾ ನೋವು ಅನುಭವಿಸುತ್ತಿದ್ದೇನೆ. ಇಷ್ಟು ವರ್ಷದಲ್ಲಿ ಕಷ್ಟಪಟ್ಟು ಜೀವನ ಮಾಡಿದ್ದೇನೆ. ಒಂದು ಕಪ್ಪು ಚುಕ್ಕೆಯೂ ಇರಲಿಲ್ಲ. ಇದನ್ನು ನಿವಾರಣೆ ಮಾಡಿಕೊಳ್ಳಲು ಧರ್ಮಸ್ಥಳಕ್ಕೆ ಹೋಗುತ್ತೇನೆ. ಮಂಜುನಾಥ, ಅಣ್ಣಪ್ಪನೇ ನನಗೆ ದಾರಿದೀಪ,” ಎಂದು ಭಾವುಕರಾಗಿದ್ದಾರೆ.
“ದೇವರಿಗೆ ಎಂದೂ ನಾನು ಅಪಪ್ರಚಾರ ಮಾಡಲ್ಲ. ನನಗೂ ಭಕ್ತಿ, ಭಯ ಎಲ್ಲವೂ ಇದೆ. ಈ ಎಲ್ಲ ವಿಚಾರದಿಂದಲೂ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ಬ್ರಹ್ಮ ಬರೆದ ಹಣೆಬರಹವನ್ನು ಅನುಭವಿಸಲೇಬೇಕು. ಅದು ನನ್ನ ಧರ್ಮ. ಈ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡಿ,” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.




































