
ಮೈಸೂರು: ದಕ್ಷಿಣ ಭಾರತದ ಪ್ರಯಾಗರಾಜ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ತಿರುಮಕುಡಲು ನರಸೀಪುರ (ತಿ.ನರಸೀಪುರ) ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10ರಿಂದ 12ರವರೆಗೆ 13ನೇ ಕುಂಭಮೇಳ ವಿಜೃಂಭಣೆಯಿಂದ ನಡೆಯಲಿದೆ. ಪಾವನ ಪುಣ್ಯಸ್ನಾನಕ್ಕೆ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದೆ.
ತಿ.ನರಸೀಪುರದ ತ್ರಿವೇಣಿ ಸಂಗಮವು ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾದ ಸ್ಪಟಿಕಾ ಸರೋವರದ ಸಂಗಮಸ್ಥಾನವಾಗಿದೆ. ಈ ಪವಿತ್ರ ತೀರ್ಥಕ್ಷೇತ್ರದಲ್ಲಿ ಫೆಬ್ರವರಿ 12, ಸೋಮವಾರ ಮುಂಜಾನೆ ಸಾಧು-ಸಂತರು ಮತ್ತು ಮಠಾಧೀಶರ ನೇತೃತ್ವದಲ್ಲಿ ಕುಂಭಸ್ನಾನಕ್ಕೆ ಭಾವೈಕ್ಯತೆಯ ಪೂರ್ಣೋತ್ಸವ ದೊರೆಯಲಿದೆ.
6 ವರ್ಷದ ಬಳಿಕ ಮಹೋತ್ಸವ
1989ರಿಂದ ಪ್ರತೀ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿರುವ ಈ ಮಹಾಕುಂಭಮೇಳ 2021ರಲ್ಲಿ ಕೋವಿಡ್-19 ಮಿತಿಗಳ ಕಾರಣದಿಂದಾಗಿ ನಡೆಸಲಾಗಿರಲಿಲ್ಲ. ಈ ವರ್ಷ 6 ವರ್ಷದ ಬಳಿಕ ಪುನಃ ಭಕ್ತಿ, ಸಂಸ್ಕೃತಿ ಹಾಗೂ ಪರಂಪರೆಯ ಮಹಾಸಂಗಮವಾಗಿ ಜರುಗುತ್ತಿದೆ.
ಶನಿವಾರ, ಚುಂಚನ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಧಾರ್ಮಿಕ ವೇದಿಕೆ ಮತ್ತು ಪುಣ್ಯಸ್ನಾನ ಸ್ಥಳಗಳನ್ನು ಪರಿಶೀಲಿಸಿದರು. ಅವರಿಂದ ಪೂಜಾ ಕಾರ್ಯಗಳು ನೆರವೇರಲಿದ್ದು, ಭಕ್ತಾದಿಗಳಿಗೆ ಅಗತ್ಯ ಸೌಕರ್ಯಗಳ ಪರಿಶೀಲನೆ ನಡೆಸಿದ್ದಾರೆ.
ಮಾರ್ಗ ಹಾಗೂ ಸಾರಿಗೆ ವ್ಯವಸ್ಥೆ
ತಿ.ನರಸೀಪುರ ತಲುಪಲು ವಿವಿಧ ಮಾರ್ಗಗಳಿವೆ:
✅ ಬೆಂಗಳೂರು → ಮಳವಳ್ಳಿ/ಕನಕಪುರ/ಮೈಸೂರು ಮಾರ್ಗದ ಮೂಲಕ
✅ ಮದ್ದೂರು, ಕೆ.ಎಂ. ದೊಡ್ಡಿ, ಮಳವಳ್ಳಿ, ಬೆಳಕವಾಡಿ, ಪುರಿಗಾಲಿ ಮೂಲಕ
✅ ಕನಕಪುರ → ಸಾತನೂರು, ಹಲಗೂರು, ಮಳವಳ್ಳಿ ಮಾರ್ಗವಾಗಿ
✅ ಮಂಡ್ಯ → ಕಿರುಗಾವಲು, ಕಲ್ಕುಣಿ, ಸೋಸಲೆ ಮೂಲಕ
✅ ಮೈಸೂರು → 35 ಕಿ.ಮೀ. ದೂರದಲ್ಲಿದ್ದು, ಸರಿಯಾದ ಸಾರಿಗೆ ವ್ಯವಸ್ಥೆ ಲಭ್ಯವಿದೆ.
ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಂಸ್ಕೃತಿಯ ಮಹಾ ಕೂಟವಾಗಿ ಈ ಕುಂಭಮೇಳ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡಲಿದ್ದಾರೆ.