
ಅಂಪಾರು : ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಜೆಸಿಐ ಹಾಲಾಡಿ ವಾರಾಹಿ ಘಟಕದ ವತಿಯಿಂದ ಅಂಪಾರಿನ ಸಂಜಯ ಗಾಂಧಿ ಪ್ರೌಢ ಶಾಲೆಯಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ದಿನಾಂಕ 18-02-2026 ರಂದು ನಡೆದ ಈ ಕಾರ್ಯಕ್ರಮದಲ್ಲಿ ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ?’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ತಜ್ಞರಿಂದ ವಿಸ್ತೃತ ಮಾರ್ಗದರ್ಶನ ನೀಡಲಾಯಿತು.

ಜೆಸಿಐ ತರಬೇತುದಾರರು ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ಸ್ ಟ್ರಸ್ಟ್ (ರಿ) ಹೈಕಾಡಿ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಕೃಷ್ಣಮೂರ್ತಿ ಹೈಕಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸರಿಯಾದ ಸಿದ್ಧತೆ ಮಾಡುವ ವಿಧಾನಗಳು, ಸಮಯ ನಿರ್ವಹಣೆಯ ಕೌಶಲ್ಯಗಳು, ಗಮನ ಕೇಂದ್ರೀಕರಣದ ತಂತ್ರಗಳು ಹಾಗೂ ಮನೋಬಲ ವೃದ್ಧಿಸುವ ಚಟುವಟಿಕೆಗಳ ಮೂಲಕ ಸ್ಪಷ್ಟ ಮಾರ್ಗದರ್ಶನ ನೀಡಿದರು. ಪ್ರಶ್ನೆಪತ್ರಿಕೆ ಬರೆಯುವ ವಿಧಾನ, ಅಂಕಗಳನ್ನು ಗಳಿಸುವ ತಂತ್ರಗಳು ಮತ್ತು ಉತ್ತರ ಮಂಡನೆಯ ಮಹತ್ವವನ್ನು ವಿವರಿಸಲಾಯಿತು. ಸಂವಾದಾತ್ಮಕ ಆಟಗಳು ಮತ್ತು ಉದಾಹರಣೆಗಳ ಮೂಲಕ ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸುವ ಧನಾತ್ಮಕ ಮನೋಭಾವ ಬೆಳೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತರಬೇತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ಮೂಡಿ ಪರೀಕ್ಷೆಗೆ ಸನ್ನದ್ಧರಾಗಲು ಸಹಾಯವಾಯಿತು. ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಶ್ರೀ ಉದಯ್ ಕುಮಾರ್ ಬಿ ಇವರು ಭಾಗವಹಿಸಿದ್ದರು. ಶಾಲಾ ಶಿಕ್ಷಕಿಯರಾದ ಗೀತಾ ನಾಯಕ್ ,ಕಾವ್ಯ ,ಸವಿತಾ, ಲೇಡಿ ಜೆಸಿ ಪ್ರೆಸಿಡೆಂಟ್ ಜೆಸಿ ಅವಶ್ಯ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರು ಜೆಸಿ ಆಶಾ ಬ್ರೈಟ್ ಪರ್ಲ್ ಹಾಲಾಡಿ, ಉಪಾಧ್ಯಕ್ಷರು ಜೆಸಿ ಕೃಷ್ಣ ಭಟ್ ಹಾಲಾಡಿ, ಸಂಯೋಜಕಿ ಜೆಸಿ ದೀಪಾ ಶೆಟ್ಟಿ, ಸಹ ಕಾರ್ಯದರ್ಶಿ ಜೆಸಿ ಮಂಜುಳಾ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.



































