
ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಸದಾ ಸೈದ್ಧಾಂತಿಕ ಸಂಘರ್ಷಕ್ಕೆ ಹೆಸರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಮ್ಮೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಗುಡುಗಿದ್ದಾರೆ. ವಿಧಾನ ಪರಿಷತ್ ಕಲಾಪದ ವೇಳೆ ನಡೆದ ಸ್ವಾರಸ್ಯಕರ ಹಾಗೂ ಜಿದ್ದಾಜಿದ್ದಿನ ಚರ್ಚೆಯಲ್ಲಿ, ತಮ್ಮ ರಾಜಕೀಯ ನಿಲುವನ್ನು ಅವರು ಅತ್ಯಂತ ಸ್ಪಷ್ಟವಾಗಿ ಪುನರುಚ್ಚರಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ, ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸಿಎಂ ನಡುವೆ ವಾಕ್ಸಮರ ನಡೆಯಿತು. ನಾರಾಯಣಸ್ವಾಮಿ ಅವರು ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದಾಗ, “ನೀವು ನಮ್ಮ ಕಡೆ ಬನ್ನಿ, ಚರ್ಚಿಸೋಣ” ಎಂದು ಸಿದ್ದರಾಮಯ್ಯ ನಗುತ್ತಲೇ ಆಹ್ವಾನ ನೀಡಿದರು. ಇದಕ್ಕೆ ಪ್ರತಿಯಾಗಿ ನಾರಾಯಣಸ್ವಾಮಿ ಅವರು “ನಾನು ನಿಮ್ಮ ಕಡೆ ಬರುವುದಿಲ್ಲ” ಎಂದು ನಿರಾಕರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಎನ್. ರವಿಕುಮಾರ್, “ನೀವೇ ಬಿಜೆಪಿಗೆ ಬನ್ನಿ, ಅಲ್ಲಿ ನಿಮಗೆ ತೊಂದರೆ ನೀಡುತ್ತಿದ್ದಾರೆ” ಎಂದು ಸಿಎಂಗೆ ಆಹ್ವಾನ ನೀಡಿದರು.
ಈ ಆಹ್ವಾನಕ್ಕೆ ಖಡಕ್ ಆಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾನು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ತತ್ವ-ಸಿದ್ಧಾಂತಗಳನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದವನು. ನನ್ನ ಜೀವಮಾನದಲ್ಲಿ ಆ ಕಡೆ ತಲೆಹಾಕಿ ಮಲಗುವ ಪ್ರಶ್ನೆಯೇ ಇಲ್ಲ” ಎಂದು ಸಾರಿದರು. ಬಿಜೆಪಿ ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ವಿರೋಧಿ ಧೋರಣೆ ಹೊಂದಿದೆ ಎಂದು ಆರೋಪಿಸಿದ ಅವರು, ಅಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ ಎಂದು ಟೀಕಿಸಿದರು.



































