
ಶಿರ್ವ: ಪಾಪನಾಶಿನಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ, ಹಿಟಾಚಿ ಯಂತ್ರ ಮತ್ತು ಎರಡು ಟಿಪ್ಪರ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ನಿರ್ದೇಶನದಂತೆ, ಪೊಲೀಸರ ತಂಡವು ಶಿರ್ವದ ಸೂಡ ಗರಡಿ ಮನೆ ಸಮೀಪದ ಪಾಪನಾಶಿನಿ ನದಿ ದಡದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದೆ. ಈ ವೇಳೆ ಮೂಲ್ಕಿ ಮೂಲದ ಪ್ರಜ್ವಲ್ ಎಂಬಾತ ಹಿಟಾಚಿ ಯಂತ್ರವನ್ನು ಬಳಸಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದು ಕಂಡುಬಂದಿದೆ.
ದಾಳಿಯ ಸಂದರ್ಭದಲ್ಲಿ, ಯಾವುದೇ ಪರವಾನಗಿ ಇಲ್ಲದೆ ಕಳ್ಳತನದಿಂದ ಮರಳು ತೆಗೆದು ಸಂಗ್ರಹಿಸಿಡಲಾಗಿದ್ದ ಎರಡು ಟಿಪ್ಪರ್ ತುಂಬ ಮರಳು ಮತ್ತು ಅಕ್ರಮ ಚಟುವಟಿಕೆಗೆ ಬಳಸಲಾಗುತ್ತಿದ್ದ ಹಿಟಾಚಿ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಮರಳುಗಾರಿಕೆ ಪ್ರದೇಶವು ಕಾಪು ಮತ್ತು ಕಾರ್ಕಳ ತಾಲ್ಲೂಕುಗಳ ಗಡಿ ಭಾಗದಲ್ಲಿ ಬರುವುದರಿಂದ, ಅಕ್ರಮ ಮರಳು ಸಾಗಾಟಕ್ಕೆ ಅನುಕೂಲಕರ ಸ್ಥಳವಾಗಿದೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಲೋಕಾಯುಕ್ತಕ್ಕೆ ದೂರು ಬಂದಿದ್ದರಿಂದ ಈ ಪ್ರದೇಶದಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿತ್ತು. ಆದರೆ, ಇತ್ತೀಚೆಗೆ ಪುನಃ ಅಕ್ರಮ ಮರಳುಗಾರಿಕೆ ಆರಂಭಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಮತ್ತು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ ಅವರ ಮಾರ್ಗದರ್ಶನವೂ ಇತ್ತು. ಈ ರೀತಿಯ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.