
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇತ್ತೀಚೆಗೆ ನಾಲ್ವರು ಗಣ್ಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು, ಅವರಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡಿದ್ದರೂ ಸಮಾಜದಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಸದಾನಂದನ್ ಮಾಸ್ಟರ್ (ಸಿ. ಸದಾನಂದನ್ ಮಾಸ್ಟರ್) ಒಬ್ಬರು. ದೇವರನಾಡು ಕೇರಳದ ಹಿರಿಯ ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞರಾಗಿರುವ ಇವರ ನಾಮನಿರ್ದೇಶನವು ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ತಂದಿದೆ.
ರಾಷ್ಟ್ರಪತಿಗಳು ಖ್ಯಾತ ವಕೀಲ ಉಲ್ವಲ್ ನಿಕಮ್, ಮಾಜಿ ವಿದೇಶಾಂಗ ಸಚಿವ ಹರ್ಷವರ್ಧನ್ ಶ್ರಿಂಗ್ಲಾ, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ಅವರೊಂದಿಗೆ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ.
ಸದಾನಂದ ಮಾಸ್ಟರ್ ಹಿನ್ನೆಲೆ ಮತ್ತು ಹೋರಾಟ:
ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬಾದ ಪೆರಿಚೇರಿಯಲ್ಲಿ ಜನಿಸಿದ ಸದಾನಂದ ಮಾಸ್ಟರ್ ಅವರ ಜೀವನ ಹೋರಾಟದಿಂದ ಕೂಡಿದೆ. ಕಮ್ಯುನಿಸ್ಟ್ ಕುಟುಂಬದಲ್ಲಿ ಜನಿಸಿದ್ದರೂ, ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಿದ್ಧಾಂತದಿಂದ ಪ್ರಭಾವಿತರಾಗಿ 1984 ರಿಂದ RSS ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಗೌವಾಹಟಿ ವಿಶ್ವವಿದ್ಯಾಲಯದಿಂದ ಬಿಕಾಂ ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ ಪಡೆದಿದ್ದಾರೆ.
ಕೇರಳದಲ್ಲಿ ದಶಕಗಳಿಂದ ಕಮ್ಯುನಿಸ್ಟ್ (ಸಿಪಿಐಎಂ) ಮತ್ತು ಸಂಘ ಪರಿವಾರದ ನಡುವಿನ ರಾಜಕೀಯ ಹಿಂಸಾಚಾರಕ್ಕೆ ಅನೇಕ ಅಮಾಯಕರು ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ, ಸದಾನಂದ ಮಾಸ್ಟರ್ ಸಂಘದ ಸಿದ್ಧಾಂತದ ಪರವಾಗಿ ಗಟ್ಟಿಯಾಗಿ ನಿಂತರು.
ಭೀಕರ ದಾಳಿ ಮತ್ತು ಅವರ ದೃಢಸಂಕಲ್ಪ:
31 ವರ್ಷಗಳ ಹಿಂದೆ, 1994ರ ಜನವರಿ 25ರಂದು, ಸದಾನಂದ ಮಾಸ್ಟರ್ ಅವರು ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಗಳನ್ನು ವಿತರಿಸುವಾಗ ಸಿಪಿಐಎಂ ಕಾರ್ಯಕರ್ತರು ಎಂದು ಹೇಳಲಾದ ಗುಂಪೊಂದು ಅವರ ಮೇಲೆ ಭೀಕರ ದಾಳಿ ನಡೆಸಿತು. ಕಾರಿನಿಂದ ಅವರನ್ನು ಹೊರಗೆಳೆದು ಅವರ ಎರಡೂ ಕಾಲುಗಳನ್ನು ಕಡಿದು ಹಾಕಲಾಯಿತು. ಮಾನವೀಯತೆ ಇಲ್ಲದ ಈ ಘಟನೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಕಡಿದ ಕಾಲುಗಳನ್ನು ಮತ್ತೆ ಜೋಡಿಸಲಾಗದಂತೆ ಮರೆಮಾಡಲಾಯಿತು. ಈ ಘಟನೆ ನಡೆದಾಗ ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು.
ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ನೋವು ಅನುಭವಿಸಿದ್ದರೂ, ಸದಾನಂದ ಮಾಸ್ಟರ್ ಅವರು ಎದೆಗುಂದಲಿಲ್ಲ. ಸಂಘದ ಮೇಲಿನ ಅವರ ನಿಷ್ಠೆ ಇನ್ನಷ್ಟು ಹೆಚ್ಚಾಯಿತು. ಕೃತಕ ಕಾಲುಗಳನ್ನು ಜೋಡಿಸಿಕೊಂಡು, ಕುಳಿಕಲ್ ಶಾಲೆಯಲ್ಲಿ ಸುಮಾರು 2.5 ವರ್ಷ ಸೇವೆ ಸಲ್ಲಿಸಿದರು. ನಂತರ, ಆರ್‌ಎಸ್‌ಎಸ್‌ನ ಶಿಫಾರಸಿನ ಮೇರೆಗೆ ತ್ರಿಶೂರಿನ ದುರ್ಗಾವಿಲಾಸಂ ಶಾಲೆಯಲ್ಲಿ 25 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ 2020ರಲ್ಲಿ ನಿವೃತ್ತರಾದರು. 2021ರಲ್ಲಿ ಕೇರಳದ ಕುತುಪರಾಂಬ ಅಸೆಂಬ್ಲಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಮೂರನೇ ಸ್ಥಾನ ಗಳಿಸಿದ್ದರು.
ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನಿಗೆ ರಾಜ್ಯಸಭೆ ಸ್ಥಾನಮಾನ ಸಿಕ್ಕಿರುವುದು ಕೇರಳದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಅವರ ಪ್ರೇರಣೆಯಿಂದಲೇ ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.