
ನವದೆಹಲಿ: ಎಟಿಎಂಗಳಲ್ಲಿ 500 ರೂ. ಮುಖಬೆಲೆಯ ನೋಟುಗಳ ವಿತರಣೆಯನ್ನು ನಿಲ್ಲಿಸಲಾಗುತ್ತದೆ ಎಂಬ ವಾಟ್ಸಾಪ್ ಸಂದೇಶಗಳು ವ್ಯಾಪಕವಾಗಿ ಹರಿದಾಡುತ್ತಿದ್ದವು. ಆದರೆ, ಈ ವದಂತಿಗಳಿಗೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ಸದ್ಯಕ್ಕೆ 500 ರೂ. ನೋಟುಗಳನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ಲೋಕಸಭೆಯಲ್ಲಿ ಮಾತನಾಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, “500 ರೂ. ನೋಟುಗಳ ಪೂರೈಕೆಯನ್ನು ನಿಲ್ಲಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ. ಎಟಿಎಂಗಳು 100 ರೂ. ಅಥವಾ 200 ರೂ. ನೋಟುಗಳ ಜೊತೆಗೆ 500 ರೂ. ನೋಟುಗಳನ್ನು ವಿತರಿಸುವುದನ್ನು ಮುಂದುವರಿಸುತ್ತವೆ” ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಈ ಗೊಂದಲಕ್ಕೆ ಕಾರಣವಾದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ನಿರ್ದೇಶನದ ಬಗ್ಗೆಯೂ ಸಚಿವರು ಸ್ಪಷ್ಟಪಡಿಸಿದರು. ಏಪ್ರಿಲ್ 28, 2025 ರಂದು ಆರ್‌ಬಿಐ ಹೊರಡಿಸಿದ್ದ ಸುತ್ತೋಲೆಯಲ್ಲಿ, ಬ್ಯಾಂಕುಗಳು ಮತ್ತು ಎಟಿಎಂ ನಿರ್ವಾಹಕರು 100 ರೂ. ಮತ್ತು 200 ರೂ. ಮುಖಬೆಲೆಯ ನೋಟುಗಳು ನಿಯಮಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಚಿಸಲಾಗಿತ್ತು. ಇದು ಚಿಕ್ಕ ಮುಖಬೆಲೆಯ ನೋಟುಗಳ ಕೊರತೆ ಆಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದ್ದೇ ವಿನಃ, 500 ರೂ. ನೋಟುಗಳ ವಿತರಣೆಯನ್ನು ನಿಷೇಧಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.