
ಬೆಂಗಳೂರು: ‘ಕಾಂತಾರ ಚಾಪ್ಟರ್-1’ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದ್ದು, ಅದರ ಸಾಹಸ ಸನ್ನಿವೇಶಗಳು ಮತ್ತು ಕ್ಲೈಮ್ಯಾಕ್ಸ್‌ನ ವಾವ್ ಎನ್ನಿಸುವ ದೃಶ್ಯಗಳು ದೇಶಾದ್ಯಂತ ಮೆಚ್ಚುಗೆ ಗಳಿಸಿವೆ. ಆದರೆ, ಈ ದೃಶ್ಯಗಳ ಹಿಂದೆ ಕಲಾವಿದರು ಮತ್ತು ತಂತ್ರಜ್ಞರು ಪಟ್ಟ ಶ್ರಮ ಮತ್ತು ಹೋರಾಟ ಹೇಗಿತ್ತು ಎಂಬುದನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಮಾಧ್ಯಮ ‘ಎಕ್ಸ್’ ಖಾತೆಯಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ತೆರೆಹಿಂದಿನ ದೃಶ್ಯ ಅನಾವರಣ
ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ತೆರೆ ಹಿಂದಿನ ದೃಶ್ಯಗಳನ್ನು ಅನಾವರಣಗೊಳಿಸುವ ಈ ಫೋಟೋಗಳು, ರಿಷಬ್ ಶೆಟ್ಟಿಯವರ ಹೋರಾಟದ ಕಥೆ ಹೇಳುತ್ತವೆ. ಫೋಟೋಗಳಲ್ಲಿ, ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ ಮತ್ತು ಸುಸ್ತಾಗಿ ಮಲಗಿದ್ದ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿರುವ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ, “ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ ಎಂದರೆ, ಅದಕ್ಕೆ ತೆರೆಹಿಂದೆ ನಾವು ಪಟ್ಟ ಶ್ರಮದ ಜೊತೆಗೆ ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ” ಎಂದು ಬರೆದುಕೊಂಡಿದ್ದಾರೆ.
ಕ್ಲೈಮ್ಯಾಕ್ಸ್‌ನಂತಹ ತೀವ್ರ ದೃಶ್ಯಗಳ ಶೂಟಿಂಗ್ ವೇಳೆ ತಮ್ಮ ಕಾಲಿಗೆ ಆದ ನೋವುಗಳನ್ನು ಈ ಮೂಲಕ ಹಂಚಿಕೊಂಡಿರುವ ಅವರು, ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.



































