
ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಬಡಾವಣೆ ಅನುಮೋದನೆಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೆರಾ) ನೋಂದಣಿಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತರಲಾಗಿದೆ.
ಈ ಹೊಸ ಕಾನೂನಿನ ಪ್ರಕಾರ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿನ ಭೂ ಪರಿವರ್ತನೆಗೊಂಡ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ನೀಡುವ ಮೊದಲು, ಅಚ್ಚುಕಟ್ಟಾಗಿ ರೆರಾ ನೋಂದಣಿ ಮಾಡಿಕೊಂಡಿರಬೇಕು. ಯಾವುದೇ ರಿಯಲ್ ಎಸ್ಟೇಟ್ ಯೋಜನೆಯಲ್ಲಿ ರೆರಾ ನೊಂದಾಯಿತವಾಗದೇ ಇದ್ದರೆ, ಆ ಯೋಜನೆಗೆ ನಕ್ಷೆ ಅನುಮೋದನೆ ನೀಡಲಾಗುವುದಿಲ್ಲ.
ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಅರ್ಹ ಇಂಜಿನಿಯರ್ ಅಥವಾ ವಾಸ್ತುಶಿಲ್ಪಿಯು ಕಟ್ಟಡದ ದೃಢೀಕರಣ ಪತ್ರ ನೀಡಬೇಕಾಗುತ್ತದೆ. ಈ ದೃಢೀಕರಣದ ನಂತರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರದ ತಾಂತ್ರಿಕ ಅಧಿಕಾರಿ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಬೇಕಾಗುತ್ತದೆ.
ಪರಿಶೀಲನೆಯ ವೇಳೆ ಕಟ್ಟಡವು ಅನುಮೋದಿತ ನಕ್ಷೆಗೆ ಅನುಗುಣವಾಗಿದೆಯೇ, ರೆರಾ ನೋಂದಣಿ ಮಾಡಿರುವದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಈ ಎಲ್ಲಾ ಷರತ್ತುಗಳು ಪೂರ್ತಿಯಾದ ಬಳಿಕವೇ ತಾಂತ್ರಿಕ ಅಧಿಕಾರಿಯು PDO ಜೊತೆಯಲ್ಲಿ ಸಹಿ ಮಾಡಿ ಅಂತಿಮವಾಗಿ ನಿರ್ಮಾಣ ಪೂರ್ಣಗೊಂಡ ಪ್ರಮಾಣಪತ್ರ (completion certificate) ನೀಡುತ್ತಾರೆ.
ಈ ತಿದ್ದುಪಡಿಯು ಗ್ರಾಮೀಣ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳ ಗುಣಮಟ್ಟ ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದು, ಗ್ರಾಹಕರ ಹಕ್ಕು ರಕ್ಷಣೆಯತ್ತ ಸರ್ಕಾರದ ಪ್ರಗತಿಪರ ಹೆಜ್ಜೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.