
ಉಡುಪಿ : ‘ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾವಾಗ’ ಎಂಬ ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ್ ಪ್ರಶ್ನೆಗೆ ‘ನಿಮ್ಮ ಹೆರಿಗೆ ಆದ್ಮೇಲೆ’ ಎಂಬ ಉಡಾಫೆ ಉತ್ತರ ನೀಡಿರುವ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರ ವರ್ತನೆ ಕಾಂಗ್ರೆಸ್ ಪಕ್ಷದ ಕೀಳು ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಬಲೀಕರಣದ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುವ ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷದ ಹಿರಿಯ ಶಾಸಕರ ಕೀಳು ಅಭಿರುಚಿಯ ಉತ್ತರ ಭೂಷಣವೆನಿಸುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಅತ್ತ ಬಿಹಾರದ ಪಾಟ್ನಾದಲ್ಲಿ ಕಾಂಗ್ರೆಸ್-ಆರ್.ಜೆ.ಡಿ. ಮೈತ್ರಿಕೂಟದ ಪ್ರಚಾರದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ವಿನಾಕಾರಣ ನಿಂದಿಸಿ ಅವಮಾನಿಸಲಾಗಿದೆ. ಈ ಎರಡೂ ಅಮಾನವೀಯ ಘಟನೆಗಳು ಅತ್ಯಂತ ಖಂಡನಾರ್ಹವಾಗಿದೆ.
ಗ್ಯಾರಂಟಿಗಳ ಸೋಗಿನಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಕಾರಣ ರೋಸಿ ಹೋಗಿರುವ ಜನತೆಯ ಪರವಾಗಿ ಆಸ್ಪತ್ರೆಯ ಕುರಿತು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಪತ್ರಕರ್ತೆಯನ್ನು ಅವಮಾನಿಸಿ ಮಹಿಳೆಯರ ಬಗ್ಗೆ ಕೀಳರಿಮೆ ಪ್ರದರ್ಶಿಸಿರುವ ಶಾಸಕ ಆರ್. ವಿ. ದೇಶಪಾಂಡೆ ರಾಜ್ಯದ ಮಹಿಳೆಯರ ಕ್ಷಮೆ ಕೋರಬೇಕು ಎಂದು ಶಿಲ್ಪಾ ಜಿ. ಸುವರ್ಣ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.