
ಪುತ್ತೂರು : ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರನಿಂದ ಗರ್ಭಿಣಿಯಾಗಿ ಮಗುವಿಗೆ ಜನ್ಮವಿತ್ತ ಸಂತ್ರಸ್ತ ಯುವತಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನ್ಯಾಯ ಒದಗಿಸಲು ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಮಧ್ಯೆ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಹಾಗೂ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು ಸಂತ್ರಸ್ತ ಯುವತಿಯ ಮನೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ವಿಷಯದ ಗಂಭೀರತೆಯನ್ನು ವಿವರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಾ ಕುಳಾಯಿ, ಸಂತ್ರಸ್ತ ಯುವತಿಯನ್ನು ಆಕೆಯ ಗಂಡನ ಮನೆಗೆ ಸೇರಿಸುವ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. “ಇಲ್ಲಿಯವರೆಗೆ ಸಂತ್ರಸ್ತೆಗೆ ಒಬ್ಬಳು ತಾಯಿ ಇದ್ದರು. ಇನ್ನು ಮುಂದೆ ನಾನು ಕೂಡ ಅವಳಿಗೆ ತಾಯಿ. ಸಂತ್ರಸ್ತ ಕುಟುಂಬದ ಎಲ್ಲ ಖರ್ಚು ವೆಚ್ಚಗಳನ್ನು ನಾನು ಭರಿಸುತ್ತೇನೆ” ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ ಅವರು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿದ ಪ್ರತಿಭಾ ಕುಳಾಯಿ, “ನಾನು ನಿಮ್ಮೊಂದಿಗಿದ್ದೇನೆ, ಧೈರ್ಯ ಕಳೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಂಡು ಜೀವನ ಮಾಡಬೇಡಿ. ಅಂತಹ ದೊಡ್ಡ ತಪ್ಪು ನೀವೇನೂ ಮಾಡಿಲ್ಲ. ಇವತ್ತಿನಿಂದ ಮಾಸ್ಕ್ ತೆಗೆದು ಧೈರ್ಯದಿಂದ ಇರಬೇಕು” ಎಂದು ಹೇಳಿ, ಸಂತ್ರಸ್ತೆಯ ತಾಯಿ ಧರಿಸಿದ್ದ ಮಾಸ್ಕ್ ಅನ್ನು ತೆಗೆಸಿದರು. ಇಂತಹ ಘಟನೆಗಳು ನಡೆದಾಗ ಮಹಿಳೆಯರು ಧೈರ್ಯ ಕಳೆದುಕೊಳ್ಳಬಾರದು, ಬದಲಾಗಿ ಇಂತಹವರ ವಿರುದ್ಧ ಹೋರಾಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರೊಂದಿಗೆ ಸಂತ್ರಸ್ತೆಯ ತಾಯಿ ನಮಿತಾ ಅವರು ದೂರವಾಣಿಯಲ್ಲಿ ಮಾತನಾಡಿದ್ದು, ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ. ನಾಗಲಕ್ಷ್ಮಿ ಅವರು ಸಂತ್ರಸ್ತೆಯ ತಾಯಿಗೆ ಧೈರ್ಯ ಹೇಳಿ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.