
ಬಂಟ್ವಾಳ: ಕಳೆದ ಐದು ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆಗಮಿಸಿದ್ದ ಉತ್ತರ ಕನ್ನಡದ ಕಾರವಾರ ಮೂಲದ ಪಿಎಸ್‌ಐ ಖೀರಪ್ಪ ಗಟಕಾಂಬೆ (55) ಅವರು ಬಂಟ್ವಾಳ ಪೇಟೆಯಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಭಾನುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿರಸಿಯಿಂದ ವರ್ಗಾವಣೆಗೊಂಡು ಬಂಟ್ವಾಳಕ್ಕೆ ಬಂದಿದ್ದ ಅವರು, ತನಿಖಾ ವಿಭಾಗದ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿದ್ದ ಅವರು, ಭಾನುವಾರ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಠಾಣೆಯಿಂದ ಕರೆ ಮಾಡಿದರೂ ಸ್ವೀಕರಿಸದ ಕಾರಣ, ಸಂಜೆಯವರೆಗೂ ಬಾರದೇ ಇರುವುದರಿಂದ ಸಹೋದ್ಯೋಗಿಗಳಿಗೆ ಸಂಶಯ ಉಂಟಾಗಿತ್ತು. ಅವರು ಖೀರಪ್ಪ ಅವರಿದ್ದ ಮನೆಯ ಬಳಿ ತೆರಳಿ ನೋಡಿದಾಗ ಬಾಗಿಲು ಹಾಕಿಕೊಂಡಿತ್ತು. ಕಿಟಕಿಯ ಮೂಲಕ ನೋಡಿದಾಗ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು.
ಖೀರಪ್ಪ ಗಟಕಾಂಬೆ ಅವರ ಪತ್ನಿ ಮತ್ತು ಮಕ್ಕಳು ಊರಿನಲ್ಲಿದ್ದು, ಅವರು ಬಂಟ್ವಾಳದಲ್ಲಿ ಒಬ್ಬರೇ ವಾಸಿಸುತ್ತಿದ್ದ ಕಾರಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ವೈಯಕ್ತಿಕ ಮತ್ತು ಹಣಕಾಸಿನ ಸಮಸ್ಯೆಗಳೇ ಕಾರಣ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಅವರು ಭಾನುವಾರ ಬೆಳಗ್ಗೆ ತಮ್ಮ ಮನೆಮಂದಿಯೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ.
ಅವರು ಯಾವ ಹೊತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇತ್ತೀಚೆಗಷ್ಟೇ ಬಂಟ್ವಾಳಕ್ಕೆ ಬಂದಿದ್ದ ಅವರು, ತನಿಖಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಸಾರ್ವಜನಿಕವಾಗಿ ಹೆಚ್ಚು ಪರಿಚಿತರಾಗಿರಲಿಲ್ಲ.