
ಉಡುಪಿ : ವಿಶ್ವದ ಅತಿ ದೊಡ್ಡ ಸೇವಾ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಪದೇ ಪದೇ ಜಪಿಸುತ್ತಾ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಪ್ರಿಯಾಂಕ ಖರ್ಗೆ ವರ್ತನೆ ಹಾಸ್ಯಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ರಾಷ್ಟ್ರ ಭಕ್ತಿಯ ಚಿಂತನೆಯೊಂದಿಗೆ ವ್ಯಕ್ತಿತ್ವ ನಿರ್ಮಾಣದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ಹೆಮ್ಮರವಾಗಿ ಬೆಳೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಮೂಲ್ಯ ಸೇವಾ ಕಾರ್ಯಗಳ ಕುರಿತು ಎಳ್ಳಷ್ಟೂ ಪರಿಜ್ಞಾನವಿಲ್ಲದ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್. ಚಟುವಟಿಕೆಗಳ ಮೇಲೆ ನಿಷೇಧ ಹೇರಲು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿರುವುದು ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ.
ಓರ್ವ ಜವಾಬ್ದಾರಿಯುತ ಸಚಿವನಾಗಿ ತನ್ನ ಖಾತೆಯಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲು ಅಸಮರ್ಥನಾಗಿರುವ ಪ್ರಿಯಾಂಕ್ ಖರ್ಗೆ ತನ್ನ ಹಾಗೂ ಸರಕಾರದ ವೈಫಲ್ಯವನ್ನು ಮರೆಮಾಚಲು ಪದೇ ಪದೇ ಆರ್.ಎಸ್.ಎಸ್. ಬಗ್ಗೆ ಮಾತನಾಡುತ್ತಿರುವುದು ಖೇದಕರ.
ಸಾರ್ಥಕ ಸೇವಾ ಚಟುವಟಿಕೆಗಳೊಂದಿಗೆ ರಾಷ್ಟ್ರ ನಿರ್ಮಾಣದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬುತ್ತಿರುವ ಸುಸಂದರ್ಭದಲ್ಲಿ ದೇಶದಾದ್ಯoತ ಲಕ್ಷಾಂತರ ಕಾರ್ಯಕ್ರಮಗಳು ನಡೆಯಲಿರುವುದು ಪ್ರಿಯಾಂಕ್ ಖರ್ಗೆಯವರಂತಹ ಸಂಕುಚಿತ ಮನೋಭಾವದ ಹಲವು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ಆರ್.ಎಸ್.ಎಸ್. ನಿಷೇಧ ಯಾರಿಂದಲೂ ಸಾಧ್ಯವಾಗದ ಮಾತು. ಈ ಹಿಂದೆ ಆರ್.ಎಸ್.ಎಸ್. ನಿಷೇಧಕ್ಕೆ ಪ್ರಯತ್ನಿಸಿದ ಕಾಂಗ್ರೆಸ್ ಪಕ್ಷದ ಘಟಾನುಗಟಿ ಪ್ರಧಾನಿಗಳು ವಿಫಲರಾಗಿ ಮುಖಭಂಗ ಎದುರಿಸಿರುವುದು ಗತ ಇತಿಹಾಸ. ಈ ನೆಲೆಯಲ್ಲಿ ಪ್ರಿಯಾಂಕ್ ಖರ್ಗೆಯವರಿಗೆ ಆರ್.ಎಸ್.ಎಸ್. ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಉಳಿದಿಲ್ಲ.
ದೇಶದ ಸ್ವಾತಂತ್ರ್ಯ ನಂತರ ಅಂದಿನ ಕಾಂಗ್ರೆಸ್ಸನ್ನು ಬರ್ಕಾಸ್ತುಗೊಳಿಸಬೇಕು ಎಂದು ಮಹಾತ್ಮ ಗಾಂಧಿ ತಿಳಿಸಿದ್ದರು. ಅಂದಿನ ಕಾಂಗ್ರೆಸ್ ನಾಯಕರು ಗಾಂಧೀಜಿ ಮಾತನ್ನು ಕಡೆಗಣಿಸಿದ್ದರೂ, ಇದೀಗ ದೇಶಭಕ್ತ ಸೇವಾ ಸಂಘಟನೆ ಆರ್.ಎಸ್.ಎಸ್. ಚಟುವಟಿಕೆಗಳ ನಿಷೇಧದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಉದ್ದಟತನದ ಮಾತುಗಳಿಂದ ಜನತೆಯೇ ಕಾಂಗ್ರೆಸ್ಸನ್ನು ನಿರ್ಮೂಲನೆ ಮಾಡಲು ಮುಂದಾಗುವುದು ನಿಶ್ಚಿತ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.