
ಬೆಂಗಳೂರು: ಆರ್‌ಎಸ್‌ಎಸ್ (RSS) ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಅವರು ನೀಡಿರುವ ‘ಪಥ ಸಂಚಲನ ಮಾಡೇ ಮಾಡುತ್ತೇವೆ’ ಎಂಬ ಸವಾಲಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು, “ಕಲ್ಲಡ್ಕ ಪ್ರಭಾಕರ್ ಭಟ್ ಇರಲಿ, ಅಥವಾ ಅವರ ತಂದೆಯೇ ಆಗಿರಲಿ, ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ” ಎಂದು ದಿಟ್ಟ ಉತ್ತರ ನೀಡಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಮುಖಂಡರ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. “ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ಅವರು ನ್ಯಾಯಾಲಯಕ್ಕಿಂತಲೂ ದೊಡ್ಡವರೇ? ಅವರು ಆ ರೀತಿ ಮಾಡಲಿ ನೋಡೋಣ. ನ್ಯಾಯಾಲಯದ ಅನುಮತಿ ಇಲ್ಲದೆ ಏನಾದರೂ ಮಾಡಿದರೆ, ಸರ್ಕಾರ ಸುಮ್ಮನೆ ಕುಳಿತಿರುತ್ತದೆಯೇ?” ಎಂದು ಪ್ರಶ್ನಿಸಿದರು. ಕಾನೂನಿನ ಪ್ರಕಾರ, ಯಾವುದೇ ಸಂಘಟನೆಗೂ ಪ್ರತಿಭಟನೆ ಅಥವಾ ಮೆರವಣಿಗೆಗೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದರು.
ಆರ್‌ಎಸ್‌ಎಸ್ ದೇಣಿಗೆಯ ಮೂಲದ ಬಗ್ಗೆ ಪ್ರಶ್ನೆ
ಈ ಸಂದರ್ಭದಲ್ಲಿ, ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ಹಣಕಾಸು ವ್ಯವಹಾರದ ಮೇಲೆ ಗಂಭೀರ ಅನುಮಾನ ವ್ಯಕ್ತಪಡಿಸಿದರು. “ಆರ್‌ಎಸ್‌ಎಸ್ ರಿಜಿಸ್ಟರ್ ಆಗಿದೆಯೇ ಎಂದು ಕೇಳಿದರೆ ತಪ್ಪೇನು? ಅವರು ಅದಕ್ಕೆ ದಾಖಲೆಗಳನ್ನು ತಂದು ನನ್ನ ಮುಖಕ್ಕೆ ಎಸೆಯಲಿ” ಎಂದು ಸವಾಲು ಹಾಕಿದರು.
ಆರ್‌ಎಸ್‌ಎಸ್ ಸಂಘಟನೆಗೆ ದೇಣಿಗೆ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಪಾರದರ್ಶಕತೆ ಬೇಕು ಎಂದು ಒತ್ತಾಯಿಸಿದರು. “ದೇವಸ್ಥಾನದ ಹುಂಡಿ ತೆರೆಯಬೇಕಾದರೂ ತಹಸೀಲ್ದಾರ್ ಬಂದು, ಎಲ್ಲವನ್ನೂ ಪಾರದರ್ಶಕವಾಗಿ ನಿರ್ವಹಿಸುತ್ತಾರೆ. ಆದರೆ, ಆರ್‌ಎಸ್‌ಎಸ್‌ಗೆ ರಾಜ್ಯ, ದೇಶ, ವಿದೇಶದಿಂದ ಬರುವ ದೇಣಿಗೆಯ ಮೂಲ ಯಾವುದು? ಇದರ ವಿವರ ಏಕೆ ಗೊತ್ತಾಗಬಾರದು?” ಎಂದು ಕೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಅನ್ನು ‘ದೇಶದ ದೊಡ್ಡ ಎನ್‌ಜಿಓ’ ಎಂದು ಕರೆದಿದ್ದನ್ನು ಉಲ್ಲೇಖಿಸಿ, ಆ ಮಹತ್ವದ ಎನ್‌ಜಿಓ ತನ್ನ ಹಣಕಾಸಿನ ಸಮಗ್ರ ಲೆಕ್ಕಪತ್ರವನ್ನು ದೇಶದ ಮುಂದೆ ಮಂಡಿಸಲಿ ಎಂದು ಖರ್ಗೆ ಆಗ್ರಹಿಸಿದರು.
ಬಹಿರಂಗ ಚರ್ಚೆಯ ಸವಾಲು
ಕಲ್ಲಡ್ಕ ಪ್ರಭಾಕರ್ ಭಟ್ ಅವರು ಬಹಿರಂಗ ಚರ್ಚೆಗೆ ಬರುವುದಿಲ್ಲ ಎಂಬ ವಿಷಯದ ಬಗ್ಗೆಯೂ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. “ಚರ್ಚೆಗೆ ಬನ್ನಿ ಎಂದು ಹೇಳಿದರೂ ಅವರು ಬರಲ್ಲ. ಅವರ ಬಳಿ ಏನಾದರೂ ‘ಕಂಟೆಂಟ್’ (ವಿಷಯ) ಇದ್ದರೆ ಬರುತ್ತಿದ್ದರು. ಬರೀ ವೈಯಕ್ತಿಕ ಟೀಕೆಗಳನ್ನು ಮಾತ್ರ ಮಾಡುತ್ತಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.
“ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಂದ ಹಿಡಿದು ಇಂದಿರಾಗಾಂಧಿಯವರವರೆಗೆ ನಾವೆಲ್ಲಾ ದೊಡ್ಡ ಮನಸ್ಸು ಮಾಡಿಕೊಂಡು ಬಂದಿದ್ದೆವು, ಅದೇ ನಮ್ಮ ತಪ್ಪು” ಎಂದು ಹೇಳುವ ಮೂಲಕ, ಆರ್‌ಎಸ್‌ಎಸ್‌ನ ಬೆಳವಣಿಗೆಗೆ ಹಿಂದಿನ ಸರ್ಕಾರಗಳು ಅವಕಾಶ ನೀಡಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದರು.




































