
ಬೆಂಗಳೂರು : “ನಾವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮೇಲೆ ನಿಷೇಧ ಹೇರಲಾಗುತ್ತದೆ” ಎಂಬ ತೀವ್ರವಾದ ಹೇಳಿಕೆಯನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಹಾಗೂ ಡಿಜಿಟಲ್ ಸೇವಾ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ್ದಾರೆ.
ಬೆಂಗಳೂರು ನಗರದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖರ್ಗೆ, “ಇದಕ್ಕೂ ಮೊದಲು ಕಾಂಗ್ರೆಸ್ ನೇತೃತ್ವದ ಸರ್ಕಾರವು ಆರ್‌ಎಸ್‌ಎಸ್ ಅನ್ನು ಎರಡು ಬಾರಿ ನಿಷೇಧಿಸಿತ್ತು. ಆಗ ಅವರು ಬಂದು ಕೈಕಾಲು ಹಿಡಿದು, ನಿಷೇಧ ಹಿಂತೆಗೆದುಕೊಳ್ಳಲು ಬೇಡಿಕೊಂಡಿದ್ದರು. ಆ ವೇಳೆ ನಿಷೇಧ ಮಾಡುವುದು ತಪ್ಪು ಎಂದು ಅನಿಸಿತ್ತು. ಆದರೆ ಈಗ ನಾವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಈ ಬಾರಿಗೆ ಆರ್‌ಎಸ್‌ಎಸ್ ಮೇಲೆ ಖಚಿತವಾಗಿ ನಿಷೇಧ ಹೇರಲಾಗುತ್ತದೆ” ಎಂದು ಹೇಳಿದರು.
RSS ಮುಖಂಡ ಹೊಸಬಾಳೆ ಹೇಳಿಕೆಗೆ ಕಿಡಿಕಾರಿಕೆ
ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದಿಂದ “ಜಾತ್ಯಾತೀತ” ಮತ್ತು “ಸಮಾಜವಾದಿ” ಪದಗಳನ್ನು ತೆಗೆದುಹಾಕಬೇಕು ಎಂದು ಮಾಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, “ಹೊಸಬಾಳೆ ಯಾವ ಸ್ಕೂಲ್ ಆಫ್ ಥಾಟ್‌ನಿಂದ ಬರುತ್ತಾರೆ ಎಂಬುದು ಸ್ಪಷ್ಟವಾಗಬೇಕಿದೆ. ಆರ್‌ಎಸ್‌ಎಸ್ ಚಿಂತನೆಗೆ ನಮ್ಮ ವಿರೋಧ ಸದಾ ಇರುತ್ತದೆ. ಅವರ ದೃಷ್ಟಿಕೋನವೇ ಸಂವಿಧಾನದ ವಿರುದ್ಧವಾಗಿದೆ” ಎಂದು ಕಿಡಿಕಾರಿದರು.
ಅಂಬೇಡ್ಕರ್ ವಿರೋಧಿಗಳಾದ ಆರ್‌ಎಸ್‌ಎಸ್?
ಪ್ರಿಯಾಂಕ್ ಖರ್ಗೆ ಅವರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದು, “ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಿಗೆ ಆರ್‌ಎಸ್‌ಎಸ್ ವಿರೋಧಿಯಾಗಿದೆ. ಈ ಕುರಿತು ನಾನು ಬಿಜೆಪಿ ನಾಯಕರಿಗೆ ದಾಖಲೆಗಳನ್ನೇ ಕೊಟ್ಟಿದ್ದೇನೆ. ಆದರೆ ಅವರು ನಾಯಿ ತರಹ ಬೊಗಳುತ್ತಾರೆ ಅಂತ ವಿಷಯ ಡೈವರ್ಟ್ ಮಾಡುತ್ತಾರೆ. ಇವರು ಮೊದಲು ಸಂವಿಧಾನ ಓದಿಕೊಳ್ಳಲಿ” ಎಂದು ಹೇಳಿದ್ದಾರೆ.