
ಉಡುಪಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಪಾಸಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗಾಗಿ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಪಿಯು ವಿಭಾಗದ ರಾಜ್ಯ ಕಚೇರಿಯಿಂದ ಮಹತ್ವದ ನಿರ್ದೇಶನ ನೀಡಲಾಗಿದೆ. ಇವರು ತಪ್ಪದೇ ಪರೀಕ್ಷೆ-2ಕ್ಕೆ ತಯಾರಿ ನಡೆಸಬೇಕು ಎಂಬ ಉದ್ದೇಶದಿಂದ ತತ್‌ಕ್ಷಣದಿಂದಲೇ ‘ಪರಿಹಾರ ಬೋಧನೆ’ ತರಗತಿಗಳನ್ನು ಆರಂಭಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆ-2ಕ್ಕೆ ನೋಂದಾಯಿಸಬೇಕು ಎಂದು ಎಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳ ಪಾಲಕರಿಗೆ ದೂರವಾಣಿ ಕರೆ ಮಾಡಿ, ಪರೀಕ್ಷೆ-2 ಕ್ಕೆ ಕಡ್ಡಾಯವಾಗಿ ನೋಂದಾಯಿಸಬೇಕು. ಈ ಕೆಲಸವನ್ನು ಪ್ರಾಂಶುಪಾಲರೇ ಮಾಡಬೇಕೆಂದು ಎಂದು ಸ್ಪಷ್ಟಪಡಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ-2ರಲ್ಲಿ ಪಾಸಾಗುವಂತೆ ಮಾಡಲು ವಿಶೇಷ ತರಬೇತಿ, ಮಾರ್ಗದರ್ಶನ, ಮಾದರಿ ಪ್ರಶ್ನೆಪತ್ರಿಕೆಗಳೊಂದಿಗೆ ಪ್ರಶ್ನೆಕೋಠಿಯ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಬರೆಯುವ ಅಭ್ಯಾಸ ಮಾಡಿಸಬೇಕು ಎಂದು ತಿಳಿಸಲಾಗಿದೆ.
ಎಪ್ರಿಲ್.11ರಿಂದ 23ರವರೆಗೆ ‘ಪರಿಹಾರ ಬೋಧನೆ’ ತರಗತಿಗಳು
ಪರಿಹಾರ ಬೋಧನೆ ತರಗತಿಗಳಿಗೆ ಸೂಕ್ತ ವೇಳಾಪಟ್ಟಿ ಸಿದ್ಧಪಡಿಸಿ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ತರಗತಿಗಳ ನಿರ್ವಹಣೆಯ ಪ್ರಕ್ರಿಯೆ, ಹಾಜರಾತಿ, ವಿಷಯವಾರು ಪಾಠ ಯೋಜನೆ ಹಾಗೂ ನಿತ್ಯದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಸರಕಾರಿ ಪಿಯು ಕಾಲೇಜುಗಳ ತರಗತಿಗಳಿಗೆ ಉಪ ನಿರ್ದೇಶಕರ ನೇತೃತ್ವದ ತಾಲೂಕು ಉಸ್ತುವಾರಿ ಸಮಿತಿ ಮೇಲ್ವಿಚಾರಣೆ ನಡೆಸಲಿದೆ.
ಕರಾವಳಿಯಲ್ಲಿ ಸಾಧನೆಯ ಮೆರುಗು
ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಕರಾವಳಿಯ ವಿದ್ಯಾರ್ಥಿಗಳು ಪ್ರಬಲ ಸಾಧನೆ ತೋರಿದ್ದಾರೆ. ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 20 ವಿದ್ಯಾರ್ಥಿಗಳು 595ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದು, ಇದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ. ಉಡುಪಿಯಿಂದ 4 ವಿದ್ಯಾರ್ಥಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಉಡುಪಿಯಿಂದ 5 ಮಂದಿ ಸಾಧನೆ ಮಾಡಿದ್ದಾರೆ.
ಟಾಪರ್‌ಗಳ ಪಟ್ಟಿಯಲ್ಲಿ ಕರಾವಳಿಯ ಪಾರಮ್ಯ
ಈ ಬಾರಿಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ದ್ವಿತೀಯ ಸ್ಥಾನದಲ್ಲಿದೆ. ಮಂಡಳಿಯ ಪ್ರಕಾರ ಈ ಬಾರಿಯ ಟಾಪರ್‌ಗಳ ಪಟ್ಟಿಯಲ್ಲಿ 128 ಮಂದಿ ಸ್ಥಾನ ಪಡೆದಿದ್ದು, ಅವರಲ್ಲಿ 54 ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರು. ವಿಜ್ಞಾನ ವಿಭಾಗದಲ್ಲಿ 24, ವಾಣಿಜ್ಯದಲ್ಲಿ 22 ಹಾಗೂ ಕಲಾ ವಿಭಾಗದಲ್ಲಿ 8 ಮಂದಿ ಈ ಪಟ್ಟಿಯಲ್ಲಿದ್ದಾರೆ.
ದಕ್ಷಿಣ ಕನ್ನಡದಿಂದ ಒಟ್ಟು 36,043 ವಿದ್ಯಾರ್ಥಿಗಳು ಪರೀಕ್ಷೆ ಬರೆದು 32,903 ಮಂದಿ ಉತ್ತೀರ್ಣರಾಗಿದ್ದಾರೆ. 45 ಮಂದಿ ಟಾಪರ್ ಪಟ್ಟಿಗೆ ಆಯ್ಕೆಯಾಗಿದ್ದಾರೆ. ಉಡುಪಿಯಿಂದ 16,127 ವಿದ್ಯಾರ್ಥಿಗಳು ಪರೀಕ್ಷೆ ಬರೆದು 14,884 ಮಂದಿ ಪಾಸಾಗಿದ್ದು, 9 ಮಂದಿ ಟಾಪರ್ ಪಟ್ಟಿಗೆ ಆಯ್ಕೆಯಾಗಿದ್ದಾರೆ.