
ಮುಜಫ಼ಾರ್ಪುರ : ಮೂಢನಂಬಿಕೆಯ ಪರಿಣಾಮ, ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ಮಾಂತ್ರಿಕನ ಕ್ರೂರತೆಗೆ ಬಲಿಯಾದ ಹೃದಯವಿದ್ರಾವಕ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯ ಮಧೇರಾ ಗ್ರಾಮದಲ್ಲಿ ನಡೆದಿದೆ. ಭೂತ ಬಿಡಿಸುವ ನೆಪದಲ್ಲಿ ಮಹಿಳೆಯನ್ನು ಮಾಂತ್ರಿಕನ ಬಳಿ ಕರೆದೊಯ್ಯಲಾಗಿತ್ತು. ಆದರೆ ಆ ವ್ಯಕ್ತಿಯು ತನ್ನ ಸಹಚರರೊಂದಿಗೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಪೀಡಿತ ಮಹಿಳೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಬದಲು ಕುಟುಂಬವು ಭಯದಿಂದ ಮಾಂತ್ರಿಕನ ಬಳಿ ಹೋಗಿದೆ. ಆಕೆಯೊಂದಿಗಿದ್ದ ಮಾವನನ್ನು ಹೊರಗೆ ಕೂರಿಸಿ ಆಕೆಯನ್ನು ಮಾತ್ರಾ ಒಳಗೆ ಕರೆಯಲಾಗಿತ್ತು. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆ ಮೊದಲಿಗೆ ಭಯದಿಂದ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಆರೋಪಿ ಮತ್ತಷ್ಟು ಬಾರಿ ಆಕೆಗೆ ಕಿರುಕುಳ ನೀಡುತ್ತಿದ್ದರಿಂದ ತಾಳಲಾರದೆ ತಾನು ಅನುಭವಿಸಿದ ಕ್ರೂರತೆಯ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾಳೆ.
ಸ್ಥಿತಿ ಗಂಭೀರವಾಗುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಹಾಗೂ ಈ ಬಗ್ಗೆ ಶಿವಪಟ್ಟಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
ಈ ರೀತಿಯ ಘಟನೆ ಇದುವರೆಗೆ ಹಲವು ರಾಜ್ಯಗಳಲ್ಲಿ ವರದಿಯಾಗಿದ್ದು, ಕೆಲವು ತಿಂಗಳುಗಳ ಹಿಂದೆ ಉತ್ತರ ಪ್ರದೇಶದಲ್ಲಿಯೂ ಇದೇ ರೀತಿಯ ಮಾಂತ್ರಿಕ ಆಧಾರಿತ ಅತ್ಯಾಚಾರದ ಪ್ರಕರಣ ನಡೆದಿದೆ. ಅಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿ ಮೂವರು ಬಂಧಿತರಾಗಿ ಜೈಲಿನಲ್ಲಿ ಇದ್ದಾರೆ.