
ವಿಜಯಪುರ: ಕೆಲ ದಿನಗಳ ಹಿಂದೆ ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಸ್ಪಷ್ಟ ಸಂಕೇತ ನೀಡಿದ್ದಾರೆ. ಶನಿವಾರ (ಮಾ.29) ‘ಕ್ಷಮೆ ಕೇಳುವುದಿಲ್ಲ, ಬೇರೆ ಪಕ್ಷವನ್ನೂ ಕಟ್ಟುವುದಿಲ್ಲ’ ಎಂದಿದ್ದ ಯತ್ನಾಳ್, ಯುಗಾದಿ ದಿನ (ಮಾ.30) ರಾಜ್ಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಿ ಹೊಸ ರಾಜಕೀಯ ಗುಂಪು ಅಥವಾ ಪಕ್ಷ ಕಟ್ಟಲು ಸಿದ್ಧರಿದ್ದೇವೆ ಎಂದು ಘೋಷಿಸಿದರು.
ಹೊಸ ಪಕ್ಷ ಸ್ಥಾಪನೆಯ ಕುರಿತು ಸ್ಪಷ್ಟತೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, “ಬಹಳ ಜನ ರಾಜ್ಯದಲ್ಲಿ ಹಿಂದೂ ಪಕ್ಷ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸುತ್ತೇವೆ. ರಾಜ್ಯಾದ್ಯಂತ ಸಂಚರಿಸಿ ಜನಾಭಿಪ್ರಾಯ ಸಂಗ್ರಹಿಸಿ, ಜನರ ಆಶಯದ ಪ್ರಕಾರ ಮುಂದಿನ ಹಂತ ತೀರ್ಮಾನಿಸುತ್ತೇವೆ. ಜನ ಬೆಂಬಲಿಸಿದರೆ ವಿಜಯದಶಮಿಗೆ ಹೊಸ ರಾಜಕೀಯ ಪಕ್ಷ ಘೋಷಿಸುತ್ತೇವೆ” ಎಂದರು.
“ಬಿಜೆಪಿಯಲ್ಲಿ ಭವಿಷ್ಯ ಇಲ್ಲ, ಪರ್ಯಾಯ ಅಗತ್ಯ!”
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಟೀಕಿಸಿದ ಅವರು, “ವಿಜಯೇಂದ್ರ ಮಹಾಭ್ರಷ್ಟ, ನಕಲಿ ಸಹಿ, ಪಿಎಸ್‌ಐ ಹಗರಣದಲ್ಲಿ ಅವರ ಹೆಸರು ಇದೆ. ಇವರ ಕುಟುಂಬ ರಾಜಕಾರಣ ಮುಂದುವರೆದರೆ, ಪರ್ಯಾಯ ರಾಜಕೀಯ ವ್ಯವಸ್ಥೆ ತರುತ್ತೇವೆ” ಎಂದು ಹೇಳಿದರು.
“ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರರೇ ಅನಿವಾರ್ಯ”
ಯತ್ನಾಳ್ ಈ ವೇಳೆ ಯಡಿಯೂರಪ್ಪ ಮತ್ತು ವಿಜಯೇಂದ್ರರ ಮೇಲೆ ವಾಗ್ದಾಳಿ ನಡೆಸಿ, “ಬಿಜೆಪಿಯಲ್ಲಿ ಯಡಿಯೂರಪ್ಪ-ವಿಜಯೇಂದ್ರರನ್ನು ಬಿಟ್ಟರೆ ಬೇರೆ ಯಾರೂ ಬೆಳೆಯಬಾರದು ಎಂಬ ಷಡ್ಯಂತ್ರವಿದೆ. ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನಕ್ಕೆ ಮುಂದುವರಿಸಿದರೆ, ಅದು ಪಕ್ಷದ ಕರ್ಮ” ಎಂದರು.
“ವಿಜಯೇಂದ್ರ-ಸಿದ್ದರಾಮಯ್ಯ, ಡಿಕೆಶಿ-ಜಮೀರ್ ನಡುವಿನ ಸಾಥ್!”
ಯತ್ನಾಳ್ ವಿಜಯೇಂದ್ರ ಅವರ ರಾಜಕೀಯ ನಡೆಗೆ ಪ್ರಶ್ನೆ ಎತ್ತಿ, “ವಿಜಯೇಂದ್ರ ಅವರದ್ದು ಸಿದ್ದರಾಮಯ್ಯ ಜತೆ ಹೊಂದಾಣಿಕೆ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಬಿಜಿನೆಸ್, ಜಮೀರ್ ಅಹ್ಮದ್ ಜತೆ ನಿಕಟತೆ ಇದೆ” ಎಂದು ಗಂಭೀರ ಆರೋಪ ಮಾಡಿದರು.