
ಮೈಸೂರು : ಮೈಸೂರು ತಾಲ್ಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ‘ಹೈಟೆಕ್’ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ, 6 ಪುರುಷರು ಮತ್ತು ಇಬ್ಬರು ಯುವತಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓಡನಾಡಿ ಸಂಸ್ಥೆ ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಓಡನಾಡಿ’ ಸಂಸ್ಥೆಯು ಅಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ, ಮೈಸೂರು ಜಿಲ್ಲಾ ಪೊಲೀಸರು ಕೂಡಲೇ ತಂಡದೊಂದಿಗೆ ದಾಸನಕೊಪ್ಪಲು ಗ್ರಾಮದ ಒಂದು ಮನೆ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ, ಆ ಮನೆಯಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ಬಯಲಿಗೆ ಬಂದಿದ್ದು, 6 ಪುರುಷರು ಮತ್ತು ಇಬ್ಬರು ಯುವತಿಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತರು ಬೇರೆ ಬೇರೆ ಪ್ರದೇಶಗಳಿಂದ ಯುವತಿಯರಿಗೆ ಹಣ ನೀಡಿ ಕರೆಸಿಕೊಂಡು, ಪ್ರತಿ 30 ದಿನಗಳಿಗೆ ಒಮ್ಮೆ ಮನೆ ಬದಲಾಯಿಸುತ್ತಾ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ಇದೇ ಮನೆಯಲ್ಲಿ ನಕಲಿ ಪೇಯಿಂಗ್ ಗೆಸ್ಟ್ ಹೆಸರಿನಲ್ಲಿ ಯುವತಿಯರನ್ನು ಇರಿಸಲಾಗಿತ್ತು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಸ್ಥಳೀಯರು ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಬಂಧಿತ ಯುವತಿಯರನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.