
ನೋಡ ಬನ್ನಿ ಕಾರ್ಕಳ ಬಸ್ ಸ್ಟ್ಯಾಂಡ್ ಗಣೇಶನನ್ನು
ಕಾರ್ಕಳ : ಗುಡಿಯಲ್ಲಿದ್ದ ಗಣಪನನ್ನು ಸಾರ್ವಜನಿಕವಾಗಿ ಪೂಜಿಸುವ ಕಲ್ಪನೆ ಹುಟ್ಟಿಕೊಂಡಿದ್ದರ ಹಿಂದೆ ಮಹಾನ್ ಕ್ರಾಂತಿಯ ಚಿಂತನೆಯಿದೆ. ಬ್ರಿಟೀಷ್ ಭಾರತದಲ್ಲಿ ಭಾರತೀಯರನ್ನು ಜಾತಿ ಮತ ಧರ್ಮಗಳ ಭೇದಭಾವ ಇಲ್ಲದೆ ಒಗ್ಗೂಡಿಸುವ ಚಿಂತನೆಯಿಂದ ಬಾಲಗಂಗಾಧರ ತಿಲಕರು ಆಚರಣೆಗೆ ತಂದ ಸಾರ್ವಜನಿಕ ಗಣೇಶೋತ್ಸವವು ಇಂದು ಸರ್ವ ವ್ಯಾಪಿಯಾಗಿದೆ.
ಯಾವ ಆಶಯದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಕಲ್ಪನೆಯನ್ನು ಕೊಟ್ಟರೋ ತಿಲಕರ ಆಶಯಕ್ಕೆ ಎಳ್ಳಷ್ಟೂ ಚ್ಯುತಿ ಬರದಂತೆ ಸರ್ವ ಜನಾಂಗವನ್ನೂ ಒಳಗೊಂಡ ಸಾರ್ವಜನಿಕ ಗಣೇಶೋತ್ಸವಕ್ಕೆ ಸಾಕ್ಷಿಯೇ ನಮ್ಮ ಕಾರ್ಕಳದ “ಬಸ್ಟ್ಯಾಂಡ್ ಗಣೇಶೋತ್ಸವ”.
ಕಾರ್ಕಳ ತಾಲೂಕಿನ ಕೇಂದ್ರ ಬಿಂದುವಾಗಿರುವ , ಜಿಲ್ಲೆಯ ನಾನಾ ಭಾಗಗಳಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಕಾರ್ಕಳ ಬಸ್ ಸ್ಟ್ಯಾಂಡಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲರನ್ನೂ ಎದುರುಗೊಳ್ಳಲಿದ್ದಾನೆ ನಮ್ಮ ಪ್ರೀತಿಯ “ಬಸ್ಟ್ಯಾಂಡ್ ಗಣಪ”.
ಕಳೆದ 18 ವರ್ಷಗಳಿಂದ ಎಲ್ಲಾ ಧರ್ಮ, ಜಾತಿ , ವರ್ಗದ ಜನರಿಂದ ಶೃಧ್ದೆ ಮತ್ತು ಭಕ್ತಿಯಿಂದ ಪೂಜಿಸಲ್ಪಟ್ಟು , ತನ್ನ ಮೇಲೆ ನಂಬಿಕೆ ಇಟ್ಟು ಹರಕೆ ಹೊತ್ತ ಭಕ್ತರನ್ನು ಹರಸಿ , ಭಕ್ತರು ಸಮರ್ಪಿಸಿದ ಕಾಣಿಕೆಯನ್ನು ತನ್ನೊಳಗೆ ಇರಿಸದೆ ಸಂಕಷ್ಟದಲ್ಲಿರುವ ಭಕ್ತರಿಗೆ ಧನ ಸಹಾಯದ ರೂಪದಲ್ಲಿ ನೀಡಿ ಅವರ ಕಷ್ಟಕ್ಕೆ ನೆರವಾಗಿ ಸಂಕಷ್ಟಹರ ಗಣಪ ಎಂದು ತನಗಿರುವ ಬಿರುದಿನಂತೆ ಭಕ್ತರ ಸಂಕಷ್ಟವನ್ನು ದೂರಗೊಳಿಸುತ್ತಲಿದ್ದಾನೆ ನಮ್ಮ ಬಸ್ಟ್ಯಾಂಡ್ ಗಣಪ.
ತನ್ನನ್ನು ನಂಬಿದ ಭಕ್ತರು ಪರಸ್ಪರ ಪ್ರೀತಿ ನಂಬಿಕೆಯಿಂದ ಬಾಳಿ ಬದುಕುವಂತೆ ಕಾಪಾಡುವ ಬಸ್ ಸ್ಟ್ಯಾಂಡ್ ಗಣೇಶ ಮತ್ತೊಮ್ಮೆ ನಮಗೆ ದರ್ಶನ ನೀಡಲು ಇದೇ ಅಗಸ್ಟ್ ತಿಂಗಳ 27ನೇ ತಾರೀಖಿನಂದು ಕಾರ್ಕಳ ಬಸ್ ಸ್ಟ್ಯಾಂಡ್ ನಲ್ಲಿ 18ನೇ ಬಾರಿಗೆ ನಮ್ಮೆಲ್ಲರನ್ನು ಹರಸಲು ಬರುತ್ತಿದ್ದಾನೆ.
ಗಣೇಶೋತ್ಸವದ ಮೂಲಕ ನಡೆಯುವ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನಿಮ್ಮ ಸಹಕಾರವಿರಲಿ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ) ಬಸ್ಟ್ಯಾಂಡ್ ಕಾರ್ಕಳ ಇದರ ಸ್ಥಾಪಕಾಧ್ಯಕ್ಷರಾದ ಶುಭದರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.