
ಉಡುಪಿ, ಫೆಬ್ರವರಿ 27: ರಾಜ್ಯದ ಉಪಹಾರ ಅಂಗಡಿಗಳು, ಹೋಟೆಲ್, ರಸ್ತೆ ಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಲು ಸಜ್ಜಾಗಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಅಧಿಕೃತ ಸುತ್ತೋಲೆ ಹೊರಬರುವ ನಿರೀಕ್ಷೆಯಿದೆ.
ಸಚಿವರ ಪ್ರಕಾರ, ಉಪಹಾರ ಅಂಗಡಿಗಳು, ಹೋಟೆಲ್ ಹಾಗೂ ಪ್ಲಾಸ್ಟಿಕ್ ಪ್ಯಾಕಿಂಗ್ ಮಾಡುವ ಅಂಗಡಿಗಳಿಗೆ ನಿಯಮ ಬಿಗಿಗೊಳಿಸಲು ತೀರ್ಮಾನಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿಷೇಧ ಹೇರಿದ ಬಳಿಕ, ಪ್ಲಾಸ್ಟಿಕ್ ಬಳಕೆ ಮಾಡಿದವರ ವಿರುದ್ಧ ದಂಡ ವಿಧಿಸಲಾಗುವುದು. ಇನ್ನೆರಡು ದಿನದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ: ಆರೋಗ್ಯಕ್ಕೆ ಅಪಾಯ
ಬೆಂಗಳೂರಿನ ಹಲವಾರು ಉಪಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸಿ ಇಡ್ಲಿ ತಯಾರಿಸುವುದರ ಬಗ್ಗೆ ವರದಿಯೊಂದು ಬೆಳಕಿಗೆ ಬಂದಿದೆ. ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಬಳಸಿ ಇಡ್ಲಿ ಮಾಡುವುದು ಮಾತ್ರವಲ್ಲ, ಆಹಾರ ಪ್ಯಾಕಿಂಗ್‌ಗೂ ಪ್ಲಾಸ್ಟಿಕ್ ತೀವ್ರವಾಗಿ ಬಳಕೆಯಾಗುತ್ತಿದೆ.ಆಹಾರ ತಯಾರಿಕೆ, ಬಡಾವಣೆ, ಪ್ಯಾಕಿಂಗ್ ವೇಳೆ ಪ್ಲಾಸ್ಟಿಕ್ ಬಳಕೆ ಹೆಚ್ಚಾದರೆ, ಬಿಸಿಲಿನ ಶಾಖಕ್ಕೆ ಒಡ್ಡಿಕೊಂಡಾಗ ಅದು ಕ್ಯಾನ್ಸರ್‌ಕಾರಕ ಅಂಶಗಳನ್ನು ಹೊರಸೂಸಬಹುದು ಎಂಬ ಆತಂಕವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಸರ್ಕಾರದ ಕಟ್ಟುನಿಟ್ಟಿನ ನಿರ್ಧಾರ
ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಆದೇಶ ಜಾರಿಗೆ ಬಂದ ಬಳಿಕ, ಅದರ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಲಾಗುವುದು.