
ಉಡುಪಿ : ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ಉಗ್ರರ ದಾಳಿಯನ್ನು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಈ ಭೀಕರ ದಾಳಿಯಿಂದ ತಮಗೆ ಆಘಾತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ ಅವರು, ದೇಶದ ಒಳಗಿನ ಭದ್ರತೆಗಾಗಿ ಕೇಂದ್ರ ಸರ್ಕಾರ ತಕ್ಷಣ ಬಲವಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶ್ರೀಗಳು ಮಾತನಾಡುತ್ತಾ, “ಇತ್ತೀಚಿನ ದಿನಗಳಲ್ಲಿ ಒಂದೆಡೆ ಪಶ್ಚಿಮ ಬಂಗಾಳದಲ್ಲಿ, ಇನ್ನೊಂದೆಡೆ ಕಾಶ್ಮೀರದಲ್ಲಿ ಹಿಂದೂ ಸಮುದಾಯದ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕಾಶ್ಮೀರದಲ್ಲಿ ನಡೆದ ದಾಳಿ ‘ಕಾಶ್ಮೀರ ಫೈಲ್ಸ್’ ಚಿತ್ರದ ದೃಶ್ಯಗಳನ್ನು ನೆನಪಿಸಿಕೊಳ್ಳುವಂತಾಗಿದೆ. ಇದು ಖಂಡನೀಯ ಹಾಗೂ ಅತಿ ಆಘಾತಕಾರಿ ಘಟನೆಯಾಗಿದೆ,” ಎಂದು ಹೇಳಿದರು.
“ಇಂತಹ ಅಮಾನವೀಯ ಕೃತ್ಯಗಳು ದೇಶದ ಯಾವ ಭಾಗದಲ್ಲಿಯೂ ಮರುಕಳಿಸದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣದ ನಿಟ್ಟಿನಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು,” ಎಂದು ಶ್ರೀಗಳು ಮನವಿ ಮಾಡಿದರು.