
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಲುಷಿತ ನೀರಿನ ಸೇವನೆಯಿಂದ ಹರಡುವ ಕಾಯಿಲೆಗಳ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, ದೇಶದಲ್ಲೇ ರಾಜ್ಯವು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಅತಿಸಾರ (ಡಯೇರಿಯಾ) ಮತ್ತು ಟೈಫಾಯ್ಡ್ ಪ್ರಕರಣಗಳಲ್ಲಿ ಕರ್ನಾಟಕದ ನಗರ ಪ್ರದೇಶಗಳು, ವಿಶೇಷವಾಗಿ ರಾಜಧಾನಿ ಬೆಂಗಳೂರು ಅತಿ ಹೆಚ್ಚು ಬಾಧಿತವಾಗಿವೆ. 2022 ರಿಂದ 2025 ರ ಅವಧಿಯಲ್ಲಿ ಲಕ್ಷಾಂತರ ಪ್ರಕರಣಗಳು ದಾಖಲಾಗಿದ್ದು, ಕೇವಲ 2025 ರ ಒಂದೇ ವರ್ಷದಲ್ಲಿ 1,80,000 ಅತಿಸಾರ ಮತ್ತು 39,000 ಕ್ಕೂ ಅಧಿಕ ಟೈಫಾಯ್ಡ್ ಪ್ರಕರಣಗಳು ವರದಿಯಾಗಿವೆ.
ನಗರಗಳಲ್ಲಿ ಹೆಚ್ಚುತ್ತಿರುವ ಟ್ಯಾಂಕರ್ ನೀರಿನ ಅವಲಂಬನೆ, ಹಳೆಯ ಪೈಪ್‌ಲೈನ್‌ಗಳ ಸೋರಿಕೆಯಿಂದ ಒಳಚರಂಡಿ ನೀರು ಮಿಶ್ರಣವಾಗುತ್ತಿರುವುದು ಮತ್ತು ಅವೈಜ್ಞಾನಿಕವಾಗಿ ಮಾರಾಟವಾಗುವ ಪ್ಯಾಕೇಜ್ಡ್ ಕುಡಿಯುವ ನೀರು ಈ ಸೋಂಕಿಗೆ ಪ್ರಮುಖ ಕಾರಣಗಳಾಗಿವೆ. ಪ್ರಸ್ತುತ ಬೇಸಿಗೆಯ ಆರಂಭದಲ್ಲೇ ದಿನಕ್ಕೆ ಸರಾಸರಿ 1,0- ಪ್ರಕರಣಗಳು ವರದಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ಭೀತಿ ಎದುರಾಗಿದೆ. ವಾಂತಿ, ಭೇದಿ, ಜ್ವರ ಮತ್ತು ತೀವ್ರ ಹೊಟ್ಟೆನೋವಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಮತ್ತು ಹಿರಿಯ ನಾಗರಿಕರು ಈ ಕಲುಷಿತ ನೀರಿನ ಜಾಲಕ್ಕೆ ಬಲಿಯಾಗುತ್ತಿದ್ದಾರೆ.




































