
ಅಹಮದಾಬಾದ್ : ಸಹೋದ್ಯೋಗಿಯೊಬ್ಬ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಆತನ ಮೇಲೆ ಸೇಡು ತೀರಿಸಿಕೊಳ್ಳಲು ದೇಶದ 12 ರಾಜ್ಯಗಳಿಗೆ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತೆಯನ್ನು ಚೆನ್ನೈನ ಡೆಲಾಯ್ಟ್ ಕಂಪನಿಯಲ್ಲಿ ಹಿರಿಯ ಸಲಹೆಗಾರರಾಗಿರುವ ರೆನೆ ಜೋಶಿಲ್ಲಾ ಎಂದು ಗುರುತಿಸಲಾಗಿದೆ. ಆಕೆ ದೇಶದ ವಿವಿಧ ರಾಜ್ಯಗಳ ಆಸ್ಪತ್ರೆಗಳು, ಶಾಲೆಗಳು, ಕ್ರೀಡಾಂಗಣಗಳು ಸೇರಿದಂತೆ ಒಟ್ಟು 21 ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕದ ಉಡುಪಿ ಜಿಲ್ಲೆಯ ಶಾಲೆಯೊಂದಕ್ಕೂ ಇಮೇಲ್ ಕಳುಹಿಸಿರುವುದು ಸ್ಪಷ್ಟವಾಗಿದೆ.
ಪ್ರೇಮದ ನಿರಾಕರಣೆಯಿಂದ ಮನನೊಂದ ರೆನೆ ಜೋಶಿಲ್ಲಾ :
ರೆನೆ ಜೋಶಿಲ್ಲಾ ತಮ್ಮ ಸಹೋದ್ಯೋಗಿ ದಿವಿಜ್ ಪ್ರಭಾಕರ್ ಅವರನ್ನು ಪ್ರೀತಿಸುತ್ತಿದ್ದರು.ಬೆಂಗಳೂರಿನಲ್ಲಿ ನಡೆದ ಕಾನ್ಫರೆನ್ಸ್‌ನಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೂ ದಿವಿಜ್ ಒಪ್ಪಿರಲಿಲ್ಲ. ಈ ನಿರಾಕರಣೆ ಆಕೆಯ ಮನಸ್ಸಿಗೆ ತೀವ್ರ ಆಘಾತವನ್ನುಂಟುಮಾಡಿತು. ಕೊನೆಗೆ, ದಿವಿಜ್ ಅವರ ಮದುವೆಯ ಸುದ್ದಿಯಿಂದ ಮತ್ತಷ್ಟು ಕೆರಳಿದ ರೆನೆ, ಅವರ ಹೆಸರನ್ನು ಬಳಸಿಕೊಂಡು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲು ಮುಂದಾದದ್ದು ತನಿಖೆಯಿಂದ ತಿಳಿದು ಬಂದಿದೆ.
ಅಷ್ಟರಲ್ಲೇ ನಿಲ್ಲದೇ, ಇಬ್ಬರು ಮದುವೆಯಾಗಿರುವಂತೆ ಕೃತಕ ಫೋಟೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದರು, ಈ ಸಂಬಂಧ ದಿವಿಜ್ ರವರು ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದರು.
12 ರಾಜ್ಯಗಳಲ್ಲಿ ಬೆದರಿಕೆ:
ಫೆಬ್ರವರಿ ಮತ್ತು ಜೂನ್ 2025ರ ನಡುವೆ ರೆನೆ ಜೋಶಿಲ್ಲಾ ಅವರು ಗುಜರಾತ್, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ 12 ರಾಜ್ಯಗಳ ವಿವಿಧ ಸಂಸ್ಥೆಗಳಿಗೆ ದಿವಿಜ್ ಅವರ ಹೆಸರಿನಲ್ಲಿ ಬೆದರಿಕೆ ಇಮೇಲ್ ಕಳುಹಿಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ಖಚಿತವಾಗಿದೆ. ಇದೀಗ ಸಂಬಂಧಿತ ಎಲ್ಲಾ ರಾಜ್ಯಗಳಿಗೆ ಮಾಹಿತಿ ಕಳುಹಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಾದ ಸಿಂಘಾಲ್ ತಿಳಿಸಿದ್ದಾರೆ.