
ಬೆಳಗಾವಿ: ನರ್ಸಿಂಗ್ ಓದುತ್ತಿದ್ದ ಯುವತಿ ನಾಪತ್ತೆಯಾಗಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅನ್ಯಕೋಮಿನ ಯುವಕನ ಮನೆ ಮೇಲೆ ಕುಟುಂಬಸ್ಥರಿಂದ ಕಲ್ಲು ತೂರಾಟ ನಡೆದಿದೆ.
ಈ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದ್ದು, ಫೆಬ್ರವರಿ 19 ರಂದು ರಾಧಿಕಾ ಮುಚ್ಚಂಡಿ ಎಂಬ ಯುವತಿ ನಾಪತ್ತೆಯಾಗಿದ್ದಳು. 15 ದಿನಗಳಾದರೂ ಹುಡುಕಾಟಕ್ಕೆ ಸಫಲತೆ ಸಿಗದ ಕಾರಣ, ಸದ್ರುದ್ದೀನ್ ಬೇಪಾರಿ ಯುವತಿಯನ್ನು ಅಪಹರಿಸಿದ್ದಾನೆ ಎಂಬ ಆರೋಪದ ಮೇರೆಗೆ ಆತನ ಮನೆ ಮೇಲೆ ಯುವತಿಯ ಕುಟುಂಬಸ್ಥರು ಕಲ್ಲು ತೂರಾಟ ನಡೆಸಿದ್ದಾರೆ.
ಗೃಹೋಪಕರಣಗಳು ನಾಶ, ಗಲಾಟೆ ಬಳಿಕ ಪರಾರಿಯಾದ ಕುಟುಂಬಸ್ಥರು
ಯುವತಿಯ ಸಂಬಂಧಿಕರು, ಯುವಕನ ಮನೆಯ ಬಾಗಿಲು, ಕಿಟಕಿ ಒಡೆದು, ಒಳ ನುಗ್ಗಿ ಗಲಾಟೆ ನಡೆಸಿದ್ದಾರೆ. ಅಲ್ಲದೇ, ಮನೆಯಲ್ಲಿದ್ದ ಸಾಮಾನು, ಪಾತ್ರೆಗಳು ಹಾನಿಗೊಳಗಾಗಿವೆ. ಗಲಾಟೆ ನಡೆದ ನಂತರ ಯುವತಿಯ ಸಂಬಂಧಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಗೋಪುರ-ದರ್ಗಾಗೆ ಹಾನಿ, ಮತ್ತೊಂದು ದೂರು ದಾಖಲು
ಈ ಘಟನೆ ಬೆನ್ನಲ್ಲೇ 10ಕ್ಕೂ ಹೆಚ್ಚು ಯುವಕರ ತಂಡ ಗ್ರಾಮದ ಹೊರವಲಯದಲ್ಲಿ ಈದ್ಯಾದ ಗೋಪುರ, ದರ್ಗಾದ ಕಂಬಗಳಿಗೆ ಹಾನಿ ಮಾಡಿದೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಗ್ರಾಮಸ್ಥರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.