
ಅಹಮದಾಬಾದ್ : ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತದ ನಂತರ 27 ಗಂಟೆಗಳ ಬಳಿಕ ಬ್ಲ್ಯಾಕ್ ಬಾಕ್ಸ್ (Black Box) ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬ್ಲ್ಯಾಕ್ ಬಾಕ್ಸ್ ಅಥವಾ ಫ್ಲೈಟ್ ಡಾಟಾ ರೆಕಾರ್ಡರ್, 265 ಜನರ ಜೀವಹಾನಿಗೆ ಕಾರಣವಾದ ಅಪಘಾತದ ಹಿಂದಿನ ನಿಖರ ಕಾರಣವನ್ನು ತಿಳಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದುರಂತದ ವೇಳೆ ವಿಮಾನವು ಬಿಜೆ ಆಸ್ಪತ್ರೆಗೆ ಸೇರಿದ ಹಾಸ್ಟೆಲ್ ಕಟ್ಟಡದ ಮೇಲ್ಭಾಗಕ್ಕೆ ಪತನಗೊಂಡಿದ್ದು, ಆ ಕಟ್ಟಡದ ಮೇಲ್ಛಾವಣಿಯಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರುವುದಾಗಿ ಅಧಿಕಾರಿಗಳಿಂದ ತಿಳಿದುಬಂದಿದೆ.
ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1.38ಕ್ಕೆ ಟೇಕ್ ಆಫ್ ಆಗಿತ್ತು. ಆದರೆ ಕೆಲವೇ ಸಮಯದಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿದ್ದು, ಇದರ ನಿಖರ ಕಾರಣ ಪತ್ತೆಹಚ್ಚಲು ಬ್ಲ್ಯಾಕ್ ಬಾಕ್ಸ್ ನೀಡುವ ಮಾಹಿತಿ ನಿರ್ಣಾಯಕವಾಗಲಿದೆ.