
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಶ್ರುತಿ ಆಚಾರ್ಯ (27) ಎಂಬವರು ಭಾರೀ ಮಳೆಗೆ ರೈನ್‌ಕೋಟ್ ಹಾಕಲು ಸ್ಕೂಟರ್ ನಿಲ್ಲಿಸಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಶ್ರುತಿ ಮಂಗಳೂರು ಸಮೀಪದ ಬಂಗ್ರಕುಲೂರು ನಿವಾಸಿಯಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ನಿಧನರಾದ ತಮ್ಮ ಸಹೋದರನ ಅಂತ್ಯಕ್ರಿಯೆಗಾಗಿ ಮನೆಗೆ ಬಂದಿದ್ದರು. ಅಪಘಾತದ ದಿನ, ಅವರು ತಂದೆ ಗೋಪಾಲ್ ಆಚಾರ್ಯ (53)ರ ಜೊತೆ ಕಿನ್ನಿಗೋಳಿಯಲ್ಲಿರುವ ಬ್ಯಾಂಕ್‌ಗೆ ಹೋಗಿ ಹಿಂತಿರುಗುತ್ತಿದ್ದರು.

ಮುಲ್ಕಿಯ ಪಾವಂಜೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ಬರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರೈನ್‌ಕೋಟ್ ಧರಿಸುತ್ತಿದ್ದ ವೇಳೆ, ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ನೇರವಾಗಿ ಅವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಶ್ರುತಿ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಗೋಪಾಲ್ ಆಚಾರ್ಯ ಹಾಗೂ ಪಕ್ಕದಲ್ಲಿದ್ದ ಕೈರುನ್ನಿಸಾ (52) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ದುರ್ಘಟನೆ ಸ್ಥಳೀಯರಲ್ಲಿ ಮತ್ತು ಶ್ರುತಿ ಅವರ ಸ್ನೇಹಿತರಲ್ಲಿ ಆಘಾತದ ವಾತಾವರಣ ಮೂಡಿಸಿದೆ. ಯುವ ವಯಸ್ಸಿನಲ್ಲಿ ಬಾಳಿಗೆ ವಿದಾಯ ಹೇಳಿರುವ ಶ್ರುತಿ ಅವರು ಚೆನ್ನೈಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು.