
ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ವೈದ್ಯರು 12 ವರ್ಷದ ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ಸಾಂ ಮೂಲದ ಕಮಲ್ ಹಸನ್ ಎಂಬ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಪ್ರಾಣಾಪಾಯವನ್ನು ತಪ್ಪಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪೋಷಕರೊಂದಿಗೆ ವಾಸವಿದ್ದ ಬಾಲಕ ಕಮಲ್ ಹಸನ್ ಶನಿವಾರ ಸಂಜೆ ಆಟವಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕತ್ತರಿಸಲಾಗಿದ್ದ ತೆಂಗಿನ ಗರಿಯ ಮೇಲೆ ಅವನು ಬಿದ್ದ ಪರಿಣಾಮ, ಗರಿ ಅವನ ಕುತ್ತಿಗೆಯಲ್ಲಿ ಹಾಕಿದ್ದ ಸ್ಟೀಲ್ ಚೈನ್ ನೊಂದಿಗೆ ಸೇರಿ ಎದೆಯೊಳಗೆ ನುಗ್ಗಿದೆ.
ಗಂಭೀರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣವೇ ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಯಿತು. ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಾದ ಬಾಲಕನ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ವೆನ್‌ಲಾಕ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ಡಾ. ಸುರೇಶ್ ಪೈ ನೇತೃತ್ವದಲ್ಲಿ ತಕ್ಷಣವೇ ಶಸ್ತ್ರಚಿಕಿತ್ಸೆ ಆರಂಭಿಸಿತು.
ಸತತ ಎರಡು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಕುತ್ತಿಗೆಯಿಂದ 20 ಸೆಂ.ಮೀ ಒಳಗೆ ನುಗ್ಗಿದ್ದ ತೆಂಗಿನ ಗರಿ ಮತ್ತು ಸ್ಟೀಲ್ ಚೆನ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ತಕ್ಷಣದ ಚಿಕಿತ್ಸೆ ಮತ್ತು ವೈದ್ಯರ ಸಮಯೋಚಿತ ಕಾರ್ಯದಿಂದಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈಗ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.