
ಮಂಗಳೂರು: ದಶಕದಷ್ಟು ಹಳೆಯದಾದ ಮಗು ಮಾರಾಟ (ಮಾನವ ಕಳ್ಳಸಾಗಣೆ) ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಮೂವರು ಆರೋಪಿಗಳಿಗೆ 10 ವರ್ಷಗಳ ಕಠಿಣ ಸಜೆ ಮತ್ತು ತಲಾ 5,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.
ಶಿಕ್ಷೆಗೆ ಗುರಿಯಾದವರು ಮಂಗಳೂರಿನ ಪಜೀರ್ ನಿವಾಸಿಗಳಾದ ಲಿನೆಟಾ ವೇಗಸ್ (38), ಆಕೆಯ ಪತಿ ಜೊಸ್ಸಿ ವೇಗಸ್ (54) ಮತ್ತು ಲಿನೆಟಾ ವೇಗಸ್‌ಳ ತಾಯಿ ಲೂಸಿ ವೇಗಸ್ (65). ಪ್ರಕರಣದ ಮತ್ತೊಬ್ಬ ಆರೋಪಿ, ಮಗುವಿನ ತಾಯಿ ಬಾದಾಮಿಯ ರಂಗವ್ವ (45) ವಿಚಾರಣೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: 2013ರ ಜುಲೈ 26ರಂದು ಉಳ್ಳಾಲ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಲೂಸಿ ವೇಗಸ್ ಅಂಗನವಾಡಿಯೊಂದಕ್ಕೆ ತೆರಳಿ ಎರಡೂವರೆ ತಿಂಗಳ ಮಗುವಿಗೆ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರದ ಬಗ್ಗೆ ವಿಚಾರಿಸಿದ್ದಳು. ಇದರಿಂದ ಅನುಮಾನಗೊಂಡ ಅಂಗನವಾಡಿ ಶಿಕ್ಷಕಿ ರೆಹನಾ ಅವರು “ಚೈಲ್ಡ್‌ಲೈನ್” ಸಂಸ್ಥೆಗೆ ಮಾಹಿತಿ ನೀಡಿದ್ದರು. ಚೈಲ್ಡ್‌ಲೈನ್ ಕಾರ್ಯಕರ್ತರು ಲಿನೆಟಾ ವೇಗಸ್ ಮನೆಗೆ ಭೇಟಿ ನೀಡಿದಾಗ ಎರಡೂವರೆ ತಿಂಗಳ ಮಗು ಪತ್ತೆಯಾಗಿತ್ತು.
ನಂತರ, ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಯೋಗದೊಂದಿಗೆ ಅಣಕು ಕಾರ್ಯಾಚರಣೆ ನಡೆಸಲಾಯಿತು. ಸಮಾಜ ಸೇವಕಿ ವಿದ್ಯಾದಿನಕರ್ ಮುಸ್ಲಿಂ ಮಹಿಳೆಯಂತೆ ಮತ್ತು ಪೊಲೀಸ್ ಅಧಿಕಾರಿ ಇಕ್ಬಾಲ್ ಅವರ ಪತಿಯಂತೆ ನಟಿಸಿ ಮಗುವನ್ನು ಖರೀದಿಸಲು ಮುಂದಾದಾಗ, ಆರೋಪಿಗಳು 2 ಲಕ್ಷ ರೂ.ಗೆ ಮಗುವನ್ನು ಮಾರಾಟ ಮಾಡಲು ಒಪ್ಪಿಕೊಂಡಿದ್ದರು. 2013ರ ಜುಲೈ 26ರಂದು ತೊಕ್ಕೊಟ್ಟಿನ ಕ್ಲಿನಿಕ್‌ನಲ್ಲಿ ಡೀಲ್ ನಡೆಸುವಾಗ ಆರೋಪಿಗಳು ಲಿನೆಟಾ ವೇಗಸ್ ಮತ್ತು ಲೂಸಿ ವೇಗಸ್ ಅವರನ್ನು ಬಂಧಿಸಲಾಯಿತು.
ಭಾರತೀಯ ದಂಡ ಸಂಹಿತೆ 370(4) ಮತ್ತು ಉಪ ಕಲಂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಉಳ್ಳಾಲದ ಪಿಎಸ್‌ಐ ರಮೇಶ್ ಎಚ್. ಹಾನಪುರ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು 12 ಸಾಕ್ಷಿದಾರರನ್ನು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಆರೋಪಿಗಳು ಮಗುವಿನ ದಾಖಲಾತಿಗಳಿಗಾಗಿ ನ್ಯಾಯವಾದಿಯೊಬ್ಬರನ್ನು ಸಂಪರ್ಕಿಸಿದ್ದು, ಆ ನ್ಯಾಯವಾದಿಯ ಸಾಕ್ಷ್ಯವೂ ಪ್ರಾಸಿಕ್ಯೂಷನ್‌ಗೆ ಬಲ ನೀಡಿತ್ತು.
ಮುಟ್ಟುಗೋಲು ಮತ್ತು ದಂಡ: ನ್ಯಾಯಾಲಯವು ಜೂನ್ 30ರಂದು ಆರೋಪಿಗಳ ಅಪರಾಧವನ್ನು ಸಾಬೀತುಪಡಿಸಿ ಜುಲೈ 3ರಂದು ಶಿಕ್ಷೆ ಪ್ರಕಟಿಸಿದೆ. ದಂಡ ಪಾವತಿಗೆ ವಿಫಲವಾದರೆ 6 ತಿಂಗಳ ಕಠಿಣ ಸಜೆ ಅನುಭವಿಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಮಗು ಮಾರಾಟ ಪ್ರಕರಣದಲ್ಲಿ ನೀಡಲಾಗಿದ್ದ 94,325 ರೂ. ಹಾಗೂ ಲಿನೆಟಾ ವೇಗಸ್‌ನಿಂದ ವಶಪಡಿಸಿಕೊಂಡ 5 ಮೊಬೈಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಮಗುವಿನ ಭವಿಷ್ಯ ಅಜ್ಞಾತ: ಪ್ರಕರಣದ ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳು ಮುಗಿದಿದ್ದರೂ, ಮಾರಾಟಕ್ಕೆ ಯತ್ನಿಸಲಾಗಿದ್ದ ಮಗುವಿನ ಭವಿಷ್ಯ ಅಜ್ಞಾತವಾಗಿಯೇ ಉಳಿದಿದೆ. ಮಗುವಿನ ತಾಯಿ ರಂಗವ್ವ ಮೃತಪಟ್ಟ ನಂತರ ಮಗು ಎಲ್ಲಿದೆ ಎಂಬ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳಾಗಲೀ ಅಥವಾ ಪೊಲೀಸರಾಗಲೀ ಮಾಹಿತಿ ಪಡೆದಿಲ್ಲ. ಮಗುವಿನ ಕುರಿತು ಯಾರೂ ದೂರು ನೀಡದ ಕಾರಣ ಪತ್ತೆ ಕಾರ್ಯಾಚರಣೆಯನ್ನೂ ನಡೆಸಿಲ್ಲ.