
ಮಂಗಳೂರು: ಕರ್ನಾಟಕದ ಕರಾವಳಿ ನಗರ ಮಂಗಳೂರು ಈಗ ಐಸ್ ಕ್ರೀಂ ಪ್ರೇಮಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಮ್ಮೆಪಡುವಂತೆ ಮಾಡಿದೆ. “ಟೇಸ್ಟ್ ಅಟ್ಲಸ್” (Taste Atlas) ಸಂಸ್ಥೆ ಪ್ರಕಟಿಸಿದ ವಿಶ್ವದ ಶ್ರೇಷ್ಠ 100 ಐಸ್ ಕ್ರೀಂ ಗಳ ಪಟ್ಟಿಯಲ್ಲಿ ಮಂಗಳೂರಿನ ಪ್ರಸಿದ್ಧ ‘ಗಡ್ ಬಡ್’ ಐಸ್ ಕ್ರೀಂ 33ನೇ ಸ್ಥಾನ ಗಳಿಸಿದೆ.
‘ಗಡ್ ಬಡ್’ ಎಂದರೆ ಮಂಗಳೂರಿಗರ ಮನಸ್ಸಿನಲ್ಲಿ ಭಾವನಾತ್ಮಕ ಸ್ಥಳ ಪಡೆದಿರುವ ಖಾಸಗಿ ಐಸ್ ಕ್ರೀಂ. ಪಬ್ಬಾಸ್ (Pabbas) ರೆಸ್ಟೋರೆಂಟ್‌ನಲ್ಲಿ ಸಿಗುವ ಈ ಐಸ್ ಕ್ರೀಮ್ ನ ವೈಶಿಷ್ಟ್ಯವೇನೆಂದರೆ, ಗಾಜಿನ ಲೋಟದಲ್ಲಿ ಹಲವು ಲೇಯರ್‌ಗಳ ಸಂಯೋಜನೆಯೊಂದಿಗೆ ಸರ್ವ್ ಮಾಡಲಾಗುವುದು. ವೆನಿಲ್ಲಾ, ಸ್ಟ್ರಾಬೆರಿ, ಜೆಲ್ಲಿ, ಹಣ್ಣುಗಳು, ಒಣಹಣ್ಣುಗಳು ಮತ್ತು ಸಿಹಿ ಸಿರಪ್‌ಗಳ ಸಮೃದ್ಧ ಮಿಶ್ರಣ ಈ ಐಸ್ ಕ್ರೀಂನ ರುಚಿಗೆ ವಿಶೇಷ ಸ್ವಾದ ನೀಡುತ್ತದೆ.
ಬಾಲ್ಯದ ನೆನಪು, ಬೇಸಿಗೆಯ ತಂಪು ಕ್ಷಣಗಳು, ಸ್ನೇಹಿತರೊಂದಿಗೆ ಕಳೆದ ಸಂತಸದ ಸಮಯ – ಈ ಎಲ್ಲವೂ ‘ಗಡ್ ಬಡ್’ನ ಒಂದು ಚಮಚದೊಂದಿಗೆ ಜೀವಂತವಾಗುತ್ತದೆ. ಇದೀಗ ಮಂಗಳೂರು ತನ್ನ ‘ಗಡ್ ಬಡ್’ ಐಸ್ ಕ್ರೀಮ್ ಮೂಲಕ ತನ್ನ ಅನನ್ಯತೆ, ರುಚಿಯ ಪರಂಪರೆ ಮತ್ತು ಕೌಶಲ್ಯವನ್ನು ಜಗತ್ತಿನೆದುರು ಸ್ಪಷ್ಟವಾಗಿ ತೋರಿಸಿ ವಿಶ್ವದ ಗಮನ ಸೆಳೆದಿದೆ ಎಂದು ಹೇಳಬಹುದು.
ಇದು ಮಂಗಳೂರಿನ ಆಹಾರ ಸಂಸ್ಕೃತಿಯ ಗೆಲುವು ಮಾತ್ರವಲ್ಲದೆ, ಭಾರತೀಯ ಮಿಠಾಯಿ ಪ್ರಿಯರಿಗೆ ಗೌರವದ ಕ್ಷಣವೂ ಹೌದು.