
ಹೊಸದಿಲ್ಲಿ: ಮೇಕ್ ಇನ್ ಇಂಡಿಯಾ ಒಳ್ಳೆಯ ಪರಿಕಲ್ಪನೆಯಾದರೂ ಮೋದಿ ಸರ್ಕಾರ ಅದನ್ನು ಯಶಸ್ವಿಗೊಳಿಸಲು ವಿಫಲವಾಗಿದೆ, ಇದರಿಂದ ಚೀನ ಭಾರತದ ಆರ್ಥಿಕ ಪ್ರಭಾವವನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ರಾಹುಲ್, “2014ರಲ್ಲಿ ದೇಶದ ಉತ್ಪಾದನೆ ಶೇ.15.3ರಷ್ಟಿತ್ತು, ಆದರೆ ಅದು ಈಗ ಶೇ.12.6ಕ್ಕೆ ಕುಸಿದಿದೆ. ಇದು 60 ವರ್ಷಗಳಲ್ಲೇ ತಗ್ಗಿದ ಅತೀ ಕಡಿಮೆ ಪ್ರಮಾಣ. ಒಂದು ದೇಶವಾಗಿ ನಾವು ಉತ್ಪಾದನೆಯಲ್ಲಿ ಸೋತಿದ್ದೇವೆ. ಇದರಿಂದ ಚೀನ ನಮ್ಮ 4000 ಚದರ ಕಿ.ಮೀ. ಪ್ರದೇಶ ವಶಪಡಿಸಿಕೊಂಡಿದೆ, ಇದು ಆತಂಕಕಾರಿ” ಎಂದು ಹೇಳಿದರು.
ಮೋದಿಗೆ ಆಹ್ವಾನಕ್ಕಾಗಿ ಜೈಶಂಕರ್ ಅಮೆರಿಕಕ್ಕೆ?
ಅಮೆರಿಕ ಅಧ್ಯಕ್ಷ ಟ್ರಂಪ್ ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ಮೋದಿ ಆಹ್ವಾನಿತರಾಗಲು ಜೈಶಂಕರ್ ಅವರನ್ನು ಮೂರು-ನಾಲ್ಕು ಬಾರಿ ಅಮೆರಿಕಕ್ಕೆ ಕಳುಹಿಸಲಾಯಿತು, ಇದರ ಅಗತ್ಯವೇನಿತ್ತು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಒಬಿಸಿಗಳ ನಿರ್ಲಕ್ಷ್ಯ: ರಾಹುಲ್ ಗಾಂಧಿ ಆಕ್ರೋಶ
ಒಬಿಸಿಗಳ ಸಂಖ್ಯೆ ಶೇ.50ಕ್ಕಿಂತ ಹೆಚ್ಚು ಇದ್ದರೂ ಅವರ ಪ್ರಗತಿ ಕಡೆ ಮೋದಿ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. “ದೇಶದಲ್ಲಿ ಒಬಿಸಿಗಳು ಬಹುಸಂಖ್ಯೆಯಲ್ಲಿ ಇದ್ದರೂ ಒಬ್ಬರೂ ಪ್ರಮುಖ ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರಾಗಿ ಇಲ್ಲ ಎಂಬುದು ವಿಷಾದಕರ” ಎಂದು ಅವರು ಹೇಳಿದ್ದಾರೆ.
ರಾಹುಲ್ ಹೇಳಿಕೆ ಸುಳ್ಳು: ಸಾಕ್ಷ್ಯ ಕೊಡಲಿ – ಕಿರಣ್ ರಿಜಿಜು
ರಾಹುಲ್ ಗಾಂಧಿಯ ಆರೋಪಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, “ಚೀನ ಭಾರತದೊಳಗೆ ಪ್ರವೇಶಿಸಲು ಮೋದಿ ಕಾರಣ ಎಂಬುದಕ್ಕೆ ಸಾಕ್ಷ್ಯವೇನು? ನೀವು ಸುಳ್ಳು ಹೇಳುತ್ತಿದ್ದೀರಿ” ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾದ ರಿಜಿಜು, ರಾಹುಲ್ ಗಾಂಧಿಯಿಂದ ಸ್ಪಷ್ಟನೆ ಕೇಳಲು ಆಗ್ರಹಿಸಿದ್ದಾರೆ.
ಪ್ರಧಾನಿಯೇ ಒಬಿಸಿ: ರಿಜಿಜು ತಿರುಗೇಟು
“ರಾಹುಲ್ ಒಬಿಸಿಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಪ್ರಧಾನ ಮಂತ್ರಿ ಮೋದಿಯೇ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೇ ಜಾಗತಿಕ ನಾಯಕರೂ ಹೌದು . ಇದು ರಾಹುಲ್‌ಗೆ ಕಾಣುತ್ತಿಲ್ಲವಾ?” ಎಂದು ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ.
ಭಾರತದ ಪ್ರತಿಷ್ಠೆಗೆ ಮಸಿ ಬಳಿಯುವ ಕೆಲಸ: ಜೈಶಂಕರ್
“ಅಮೆರಿಕ ಪ್ರವಾಸದ ಬಗ್ಗೆ ಸುಳ್ಳು ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಪ್ರತಿಷ್ಠೆಗೆ ಹಾನಿ ಮಾಡುವ ಕೆಲಸ ಮಾಡುತ್ತಿದ್ದಾರೆ” ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿರುಗೇಟು ನೀಡಿದ್ದಾರೆ. “ಮೋದಿಗೆ ಆಹ್ವಾನ ನೀಡಲು ನಾನು ಅಮೆರಿಕಕ್ಕೆ ಹೋಗಿಲ್ಲ. ಅದು ರಾಹುಲ್‌ಗೆ ಗೊತ್ತಿಲ್ಲ!” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.