
ವಾಷಿಂಗ್ಟನ್/ಬೆಂಗಳೂರು: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಕೆಚ್ಚೆದೆಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರು ಜಾಗತಿಕ ಮಟ್ಟದ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ದಕ್ಷಿಣ ಸುಡಾನ್‌ನಲ್ಲಿ ಮಹಿಳೆಯರ ಸಬಲೀಕರಣ ಮತ್ತು ರಕ್ಷಣೆಗಾಗಿ ಅವರು ತೋರಿದ ಅಪ್ರತಿಮ ಬದ್ಧತೆಯನ್ನು ಗುರುತಿಸಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರು ‘ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ–2025’ (UN Military Gender Advocate of the Year Award) ನೀಡಿ ಗೌರವಿಸಿದ್ದಾರೆ.
ಸಂಘರ್ಷ ಪೀಡಿತ ದಕ್ಷಿಣ ಸುಡಾನ್‌ನಲ್ಲಿ ಭಾರತೀಯ ಸೇನಾ ತುಕಡಿಯ ನೇತೃತ್ವ ವಹಿಸಿರುವ ಸ್ವಾತಿ, ‘ಸಮಾನ ಪಾಲುದಾರರು, ಶಾಶ್ವತ ಶಾಂತಿ’ ಎಂಬ ಅಭಿಯಾನದ ಮೂಲಕ ಅಲ್ಲಿನ ಸ್ಥಳೀಯ ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಠಿಣ ಭೂಪ್ರದೇಶಗಳಲ್ಲಿ ವೈಮಾನಿಕ ಮತ್ತು ಭೂಗಸ್ತು ಕಾರ್ಯಾಚರಣೆಗಳನ್ನು ನಡೆಸಿರುವ ಇವರ ತಂಡವು, ಸಂಕಷ್ಟದಲ್ಲಿದ್ದ ಸುಮಾರು 5,000ಕ್ಕೂ ಹೆಚ್ಚು ಮಹಿಳೆಯರಿಗೆ ಭದ್ರತೆಯ ಭರವಸೆ ನೀಡಿದೆ. ವಿಶ್ವದ ವಿವಿಧ ದೇಶಗಳ ಶಾಂತಿಪಾಲನಾ ಮಿಷನ್‌ಗಳಿಂದ ಬಂದಿದ್ದ ಪ್ರಬಲ ನಾಮನಿರ್ದೇಶನಗಳ ನಡುವೆ, ಭಾರತೀಯ ತಂಡವು ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದೆ.
ಮೂಲತಃ ಬೆಂಗಳೂರಿನ ಲಿಂಗರಾಜಪುರದವರಾದ ಸ್ವಾತಿ ಅವರು ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಕಳೆದ 8 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ತಂದೆ ಶಾಂತಕುಮಾರ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರೆ, ತಾಯಿ ರಾಜಮಣಿ ಅವರು ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ಶಾಂತಿ ಸ್ಥಾಪನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿದ ಸ್ವಾತಿ ಅವರ ಶ್ರಮವನ್ನು ಗುಟೆರೆಸ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.



































