
ದೇವನಹಳ್ಳಿ: ಗಂಡನ ಮನೆಯವರ ನಿರಂತರ ಕಿರುಕುಳ ಮತ್ತು ವರದಕ್ಷಿಣೆ ಪೀಡನೆಯಿಂದ ಬೇಸತ್ತ ಉಪನ್ಯಾಸಕಿಯೊಬ್ಬರು ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ.
ಪುಷ್ಪಾವತಿ (30) ಮೃತರಾದ ಉಪನ್ಯಾಸಕಿ. 11 ತಿಂಗಳ ಹಿಂದೆ ಇವರಿಗೆ ತಪಸ್ಸಿಹಳ್ಳಿಯ ವೇಣು ಎಂಬವರ ಜತೆ ವಿವಾಹವಾಗಿತ್ತು. ಮದುವೆಯ ನಂತರ ಪತಿ ಮನೆಯಲ್ಲಿ ಪುಷ್ಪಾವತಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ವರದಕ್ಷಿಣೆ ಮತ್ತು ನಿವೇಶನ ಕೊಡಿಸುವಂತೆ ಪೀಡಿಸುತ್ತಿದ್ದರು ಎಂದು ಅವರು ಆತ್ಮಹತ್ಯೆಗೆ ಮುನ್ನ ಮಾಡಿದ್ದ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಪುಷ್ಪಾವತಿ ನಾಪತ್ತೆಯಾಗಿದ್ದ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು.
ವಿಡಿಯೋದಲ್ಲಿನ ಗಂಭೀರ ಆರೋಪಗಳು
ಪುಷ್ಪಾವತಿ ಅವರು ವಿಡಿಯೋದಲ್ಲಿ ಪತಿ ಮನೆಯವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದ ದಿನದಿಂದಲೇ ಗಂಡ ತನ್ನೊಂದಿಗೆ ಸರಿಯಾಗಿ ಸಂಸಾರ ಮಾಡದೆ ದೂರ ಉಳಿಯುತ್ತಿದ್ದರು. ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, “ಇವಾಗ ಯಾಕೆ ಅರ್ಜೆಂಟ್, 1-2 ವರ್ಷ ಹೋಗಲಿ” ಎಂದು ಬೈಯುತ್ತಿದ್ದರು.
“ನಿನಗೇನಾದರೂ ತೊಂದರೆ ಇದ್ದರೆ ಆಸ್ಪತ್ರೆಗೆ ಹೋಗೋಣ ಎಂದು ಗಂಡನಿಗೆ ತಿಳಿಸಿದರೆ, ಅವರು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಮತ್ತು ಮುಟ್ಟಿದರೆ ಕಾಲಿನಿಂದ ನನ್ನ ಎದೆಗೆಲ್ಲಾ ಒದೆಯುತ್ತಿದ್ದರು. ಮಗು ಬೇಕು ಎಂದರೆ ನನ್ನ ಚಿಕ್ಕ ಮಗನ ಬಳಿ ಹೋಗು ಎಂದು ಅತ್ತೆ-ಮಾವ ಹೇಳುತ್ತಿದ್ದರು. ಮೈದುನನೂ ಅದೇ ರೀತಿ ಮಾತಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ,” ಎಂದು ಪುಷ್ಪಾವತಿ ಆರೋಪಿಸಿದ್ದಾರೆ.
15 ದಿನಗಳ ಹಿಂದೆ ಗಂಡನ ಮನೆಯವರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ಕತ್ತು ಹಿಸುಕಿ ಮನೆಯಿಂದ ಆಚೆ ಹಾಕಿದ್ದಾರೆ. ಇದನ್ನು ಪ್ರಶ್ನಿಸಲು ಬಂದ ತಮ್ಮ ಮೇಲೆಯೂ ಹಲ್ಲೆ ಮಾಡಿದ್ದು, ಅವರು ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದೂ ಪುಷ್ಪಾವತಿ ವಿಡಿಯೋದಲ್ಲಿ ತಿಳಿಸಿದ್ದಾರೆ.



































