
ಉಪ್ಪಿನಂಗಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಇಂದು (ಗುರುವಾರ, ಜುಲೈ 17) ಬೆಳಿಗ್ಗೆ ಹೆದ್ದಾರಿ ಬದಿಯ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಹೆದ್ದಾರಿಯ ಎರಡೂ ಬದಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆಯುದ್ದಕ್ಕೂ ಮಣ್ಣು ಹರಡಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.
ಮಣ್ಣು ತೆರವು ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಮಧ್ಯಾಹ್ನದವರೆಗೂ ಕಾಮಗಾರಿ ನಡೆಯುವ ಸಾಧ್ಯತೆಯಿದೆ. ಆದ್ದರಿಂದ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.