
ಬೆಂಗಳೂರು: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅವರು ಸಿನಿಮಾ ನಿರ್ಮಾಣದ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿದ್ದಾರೆ. ‘ಕೊತ್ತಲವಾಡಿ’ ಎಂಬ ಹೆಸರಿನ ಮೊದಲ ಚಿತ್ರವನ್ನು ಪ್ರೊಡ್ಯೂಸ್ ಮಾಡುವ ಮೂಲಕ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ.
ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಪುಷ್ಪಾ ಅವರು ತಮ್ಮ ಮಗ ಯಶ್ ಮತ್ತು ಸೊಸೆ ನಟಿ ರಾಧಿಕಾ ಪಂಡಿತ್ ಬಗ್ಗೆ ಮಾತನಾಡಿದರು. “ಇದು ಯಾರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ. ನಾನು ಹೊಸದಾಗಿ ಒಂದು ಚಿಕ್ಕ ಪ್ರಯತ್ನ ಮಾಡಿದ್ದೀನಿ. ಮುಂದೆ ನೋಡೋಣ ,” ಎಂದು ನಗುಮುಖದಿಂದ ಹೇಳಿದರು.
ಸೊಸೆ ರಾಧಿಕಾ ಪಂಡಿತ್ ಮೇಲಿನ ಗೌರವ ಮತ್ತು ಅಭಿಮಾನ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. “ನಮ್ಮ ರಾಧಿಕಾ ಕಥೆ ಆಯ್ಕೆ ಮಾಡೋದರಲ್ಲಿ ಯಶ್‌ಗಿಂತಲೂ ಮುಂದೆ. ನಾನು ಅವಳಿಗೆ ಅತ್ತೆ ಆಗುವುದಕ್ಕೂ ಮೊದಲೇ ಅಭಿಮಾನಿಯಾಗಿದ್ದೆ. ಕಥೆ ಆಯ್ಕೆ ಮಾಡುವ ವಿಷಯದಲ್ಲಿ ನಾನು ರಾಧಿಕಾಳಿಂದ ಇನ್ನೂ ಬಹಳಷ್ಟು ಕಲಿಯಬೇಕಿದೆ,” ಎಂದು ಪುಷ್ಪಾ ಅಭಿಮಾನಭರಿತವಾಗಿ ಹೇಳಿದರು.