
ಮಹಾರಾಷ್ಟ್ರ: ಕೆಡಿಎಂಸಿ ಚುನಾವಣಾ ಫಲಿತಾಂಶದ ನಂತರ ಮೇಯರ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಟ್ಟು 122 ಸ್ಥಾನಗಳಿರುವ ಈ ಪಾಲಿಕೆಯಲ್ಲಿ ಬಹುಮತಕ್ಕೆ 62 ಸದಸ್ಯರ ಬೆಂಬಲ ಅಗತ್ಯವಿದೆ. ಪ್ರಸ್ತುತ ಶಿಂದೆ ಅವರ ಶಿವಸೇನೆ 53 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಮಿತ್ರಪಕ್ಷ ಬಿಜೆಪಿ 50 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಧಿಕಾರ ಹಂಚಿಕೆಯ ಒಪ್ಪಂದದ ಅಡಿಯಲ್ಲಿ ಬಿಜೆಪಿ 2.5 ವರ್ಷಗಳ ಕಾಲ ಮೇಯರ್ ಅವಧಿಯನ್ನು ಕೇಳುತ್ತಿತ್ತು. ಆದರೆ, ಬಿಜೆಪಿ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮತ್ತು ಪೂರ್ಣ ಅವಧಿಗೆ ಮೇಯರ್ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳಲು ಶಿಂದೆ ಬಣವು 5 ಸದಸ್ಯರನ್ನು ಹೊಂದಿರುವ ಎಂಎನ್‌ಎಸ್ ಬೆಂಬಲವನ್ನು ಪಡೆದುಕೊಂಡಿದೆ.
ಬುಧವಾರ ಸಂಸದ ಶ್ರೀಕಾಂತ್ ಶಿಂದೆ ಅವರ ಸಮ್ಮುಖದಲ್ಲಿ ಈ ಮೈತ್ರಿಯನ್ನು ಅಧಿಕೃತಗೊಳಿಸಲಾಯಿತು. ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಸ್ಥಳೀಯ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲು ತಮ್ಮ ನಾಯಕರಿಗೆ ಮುಕ್ತ ಅವಕಾಶ ನೀಡಿದ್ದರು. ಈ ಬೆನ್ನಲ್ಲೇ ಎಂಎನ್‌ಎಸ್ ನಾಯಕರು ಶಿಂದೆ ಬಣಕ್ಕೆ ಬೆಂಬಲ ಸೂಚಿಸಿದ್ದಾರೆ.
ಉದ್ಧವ್ ಬಣಕ್ಕೆ ಮತ್ತೊಂದು ಅಘಾತ
ಈ ಮೈತ್ರಿಯು ಕೇವಲ ಬಿಜೆಪಿಗೆ ಮಾತ್ರವಲ್ಲದೆ ಉದ್ಧವ್ ಠಾಕ್ರೆ ಅವರ ಶಿವಸೇನೆ (UBT) ಬಣಕ್ಕೂ ದೊಡ್ಡ ಹೊಡೆತ ನೀಡಿದೆ. ಚುನಾವಣೆಗೂ ಮುನ್ನ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಒಂದಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಫಲಿತಾಂಶದ ಬಳಿಕ ಎಂಎನ್‌ಎಸ್ ಸದಸ್ಯರು ಶಿಂದೆ ಪರ ನಿಂತಿರುವುದು ಉದ್ಧವ್ ಬಣಕ್ಕೆ ಮುಜುಗರ ತಂದಿದೆ. ಅಷ್ಟೇ ಅಲ್ಲದೆ, ಉದ್ಧವ್ ಬಣದ 11 ಕಾರ್ಪೊರೇಟರ್‌ಗಳ ಪೈಕಿ 4 ಸದಸ್ಯರು ನಾಪತ್ತೆಯಾಗಿದ್ದು, ಅವರು ಕೂಡ ಶಿಂದೆ ಬಣವನ್ನು ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.




































