
ಉಡುಪಿ: ಜಿಲ್ಲೆಯ ಕಟಪಾಡಿಯಲ್ಲಿ ಕೌಟುಂಬಿಕ ಕಲಹದ ಕಿಚ್ಚು ಹತ್ತಿಬಂದಿದ್ದು, ಸ್ವಂತ ಪತ್ನಿ ಮತ್ತು ಮಕ್ಕಳ ಮೇಲೆಯೇ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಡುರಾತ್ರಿ ನಡೆದಿದೆ. ಆರೋಪಿ ಹನುಮಂತ ಎಂಬಾತನ ರೌದ್ರಾವತಾರಕ್ಕೆ ಬೆದರಿದ ಮೂವರು ಮಹಿಳೆಯರು ಪ್ರಾಣಭಯದಿಂದ ರಸ್ತೆಗೆ ಓಡಿ ಬಂದಿದ್ದು, ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಕಟಪಾಡಿಯಲ್ಲಿ ನಡುರಾತ್ರಿ ನಡೆದಿದ್ದೇನು?
ಕಟಪಾಡಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತ, ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ತನ್ನ ಪತ್ನಿ, ಮಗಳು ಮತ್ತು ಅತ್ತೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಮಗಳ ಮೇಲೆ ಅದೆಷ್ಟು ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದರೆ, ಅವಳ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ಒದ್ದಿದ್ದಾನೆ. ತಂದೆಯ ಈ ಪೈಶಾಚಿಕ ಕೃತ್ಯದಿಂದ ಯುವತಿ ಸ್ಥಳದಲ್ಲೇ ಅರೆಪ್ರಜ್ಞಾವಸ್ಥೆಗೆ ತಲುಪಿದ್ದಾಳೆ. ಜೀವ ಉಳಿಸಿಕೊಳ್ಳಲು ಈ ಮೂವರು ಮಹಿಳೆಯರು ತಡರಾತ್ರಿ 1 ಗಂಟೆ ಸುಮಾರಿಗೆ ಕಟಪಾಡಿ ಜಂಕ್ಷನ್ ಕಡೆಗೆ ಕಿರುಚುತ್ತಾ ಓಡಿ ಬಂದಿದ್ದಾರೆ.
ರಕ್ಷಣೆ ನೀಡಿದ ವಿಶು ಶೆಟ್ಟಿ ಮತ್ತು ಅಯ್ಯಪ್ಪ ಭಕ್ತರು
ರಸ್ತೆಯಲ್ಲಿ ಮಹಿಳೆಯರ ಆಕ್ರಂದನ ಕೇಳಿ ಧಾವಿಸಿದ ಸ್ಥಳೀಯ ಅಯ್ಯಪ್ಪ ಭಕ್ತರು, ಆರೋಪಿ ಹನುಮಂತ ರಸ್ತೆಯಲ್ಲೂ ಹಲ್ಲೆ ಮುಂದುವರಿಸದಂತೆ ತಡೆದು ಮಹಿಳೆಯರಿಗೆ ರಕ್ಷಣೆ ನೀಡಿದ್ದಾರೆ. ಕೂಡಲೇ ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳಕ್ಕೆ ಆಗಮಿಸಿ, ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೃದ್ಧ ಮಹಿಳೆಯನ್ನು ಸಖಿ ಕೇಂದ್ರಕ್ಕೆ ಸೇರಿಸಲು ತಾಂತ್ರಿಕ ಅಡೆತಡೆಗಳು ಎದುರಾದ ಕಾರಣ, ಅವರು ಇಡೀ ರಾತ್ರಿಯನ್ನು ಆಸ್ಪತ್ರೆಯಲ್ಲಿಯೇ ಕಳೆಯಬೇಕಾಯಿತು. ಪ್ರಸ್ತುತ ಕಾಪು ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ರವಾನಿಸಲಾಗಿದ್ದು, ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.




































