
ಪಹಲ್ಗಾಂ (ಕಾಶ್ಮೀರ):ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿಯ ಆತಂಕದ ನಡುವೆ, ಮಾನವೀಯತೆ ಮರೆತಿಲ್ಲ ಎಂಬುದನ್ನು ಸಾಬೀತುಪಡಿಸಿದ ಉದಾಹರಣೆ ನಡೆದಿದೆ. ಭಯೋತ್ಪಾದಕರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೊಬ್ಬನಿಗೆ, ಕಾಶ್ಮೀರದ ಯುವಕನೊಬ್ಬ ಸಮಯೋಚಿತ ನೆರವಿನೊಂದಿಗೆ ಜೀವದಾನ ನೀಡಿದ ಘಟನೆ ಇಡೀ ದೇಶದ ಗಮನ ಸೆಳೆಯುತ್ತಿದೆ.
ದಾಳಿಯ ಸಮಯದಲ್ಲಿ ತಪ್ಪಿಸಿಕೊಳ್ಳಲು ಓಡಿದಾಗ ಬಾಲಕನು ಗಂಭೀರವಾಗಿ ಗಾಯಗೊಂಡಿದ್ದ. ಆತ ಭಯದಿಂದ ಅಳುತ್ತಾ, ಎಲ್ಲಿ ಇರುವೆನೆಂಬುದು ಗೊತ್ತಿಲ್ಲದ ಸ್ಥಿತಿಯಲ್ಲಿ ನೆಲಕ್ಕುರುಳಿದ್ದ. ಈ ವೇಳೆ ಅಲ್ಲಿಯೇ ಹಾದುಹೋಗುತ್ತಿದ್ದ ಕಾಶ್ಮೀರದ ಯುವಕನೊಬ್ಬ ಬಾಲಕನನ್ನು ಕಂಡು ತಕ್ಷಣ ನೆರವಿಗೆ ಧಾವಿಸಿದ್ದಾನೆ. ಪ್ರಾಣಾಪಾಯದ ಭಯವನ್ನೂ ಲೆಕ್ಕಿಸದೆ, ಗಾಯಗೊಂಡ ಬಾಲಕನನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಕಿಲೋಮೀಟರ್‌ಗಳಷ್ಟು ದೂರದ ಆಸ್ಪತ್ರೆಗೆ ಓಡಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.
ಈ ಸಮಯೋಚಿತ ತೀರ್ಮಾನ ಹಾಗೂ ಧೈರ್ಯದಿಂದ ಬಾಲಕನ ಜೀವ ಉಳಿಯುವ ಸಾಧ್ಯವಾಯಿತು. ಯುವಕನ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲದಿದ್ದರೂ, ಈ ಮಾನವೀಯತೆ ಮತ್ತು ಸಾಹಸ ದೇಶದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.