
ಹಿರಿಯಡ್ಕ : ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಪದವಿ ಪೂರ್ವ ವಿಭಾಗದ ಎನ್ಎಸ್ಎಸ್ ವಾರ್ಷಿಕ ಶಿಬಿರ 2025ರ ಸಮಾರೋಪ ಸಮಾರಂಭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಜಾರಗುತ್ತು ಇಲ್ಲಿ ನಡೆಯಿತು.

ಸಮಾರೋಪ ಭಾಷಣ ಮಾಡಿದ ಕೃಷಿ ಅರ್ಥಶಾಸ್ತ್ರಜ್ಞ ಡಾ. ಎನ್ ಎಸ್ ಶೆಟ್ಟಿ ಇವರು ಎನ್ಎಸ್ಎಸ್ ಶಿಬಿರವು ಪರಿಸರದ ಸ್ವಚ್ಛತೆ ಮತ್ತು ಕಾಳಜಿ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತದೆ ಎಂದು ಹೇಳಿದರು. ಪರಿಸರ ಅಭಿವೃದ್ಧಿ ಮತ್ತು ಅದನ್ನು ಕಾಪಾಡುವುದು ಕೇವಲ ಈ ಪೀಳಿಗೆಯವರ ಬಳಕೆಗಷ್ಟೆ ಅಲ್ಲ, ಹಿಂದಿನವರು ಕಾಪಾಡಿಕೊಂಡು ಬಂದಿರುವುದನ್ನು ಮುಂದಿನ ಜನಾಂಗಕ್ಕೆ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಯುವಕರು ಸದೃಢರಾದರೆ ಭಾರತ ಸದೃಢವಾಗುತ್ತದೆ ಎಂದರು.

ಸಂಸ್ಥೆಯ ಪ್ರಾಂಶುಪಾಲರಾದ ಮಂಜುನಾಥ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರ ನಡೆಸಲು ಸಹಕಾರವಿತ್ತ ಸರ್ವರನ್ನೂ ವಂದಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಲಕ್ಷ್ಮಿ ನಾರಾಯಣ ಪ್ರಭು ಸದಸ್ಯರು – ಗ್ರಾಮ ಪಂಚಾಯತ್ ಕೊಡಿಬೆಟ್ಟು ಇವರು ಮಾತನಾಡಿ ಎನ್ಎಸ್ಎಸ್ ಶಿಬಿರವು ಮಾನವೀಯ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಕಾರಿಯಾಗಲಿದೆ. ಮಾನವೀಯ ಮೌಲ್ಯವಿಲ್ಲದೆ ಬದುಕಿಲ್ಲ , ಹುಟ್ಟು ಸಾವಿನ ಮಧ್ಯ ನಾವು ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದು ಮುಖ್ಯ ಎಂದರು. ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಹರೀಶ್ ಸಾಲಿಯಾನ್ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ನಿತೀಶ್ ಶೆಟ್ಟಿ, ಕೆಪಿಎಸ್ ಹಿರಿಯಡ್ಕ ದ ಅಮೃತ ಮಹೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ನಾಗರಾಜೇಂದ್ರ ಎಂ ಆರ್, ಕೆ ಪಿ ಎಸ್ ಹಿರಿಯಡ್ಕದ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀ ಬಿ ಎಲ್, ವಿಶ್ವಾಸ್, ಸದಸ್ಯರಾದ ಶ್ರೀವಿಜಯ ಶೆಟ್ಟಿ , ಉಪನ್ಯಾಸಕರಾದ ಶ್ರೀ ರಮೇಶ್ ನಾಯ್ಕ, ಶ್ರೀಮತಿ ಜಯಶ್ರೀ, ಶ್ರೀ ಸತೀಶ್ ರೈ, ಶ್ರೀಮತಿ ವಿದ್ಯಾ, ಶ್ರೀ ಮಹೇಶ, ಪ್ರೌಢಶಾಲಾ ಅಧ್ಯಾಪಕರಾದ ಶ್ರೀ ರವೀಂದ್ರ ಪ್ರಭು , ಚಿತ್ರಕಲಾ ಅಧ್ಯಾಪಕರಾದ ಶ್ರೀ ಮೋಹನ್ ಕಡಬ, ಎನ್ .ಎಸ್ .ಎಸ್. ನಾಯಕ ಕುಮಾರ್ ಅಮೋಘ, ಕುಮಾರಿ ಅದಿತಿ ಉಪಸ್ಥಿತರಿದ್ದರು.

ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ದೇವದಾಸ್ ಪ್ರಭು ಉಪನ್ಯಾಸಕರು ಪ್ರಾಸ್ತಾವಿಕವಾಗಿ ಶಿಬಿರದ ವರದಿಯನ್ನು ಮಂಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಬಿರದ ನೆನಪಿಗೆ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಡಲಾಯಿತು. ವಿದ್ಯಾರ್ಥಿಗಳಾದ ಅಮೋಘ, ಅನಿಷ , ಅದಿತಿ ಶಿಬಿರದ ಅನುಭವವನ್ನು ಹಂಚಿಕೊಂಡರು. ಕುಮಾರಿ ಅದಿತಿ ಸ್ವಾಗತಿಸಿ ಕುಮಾರಿ ಸನ್ನಿಧಿ ಧನ್ಯವಾದಗಳನ್ನು ತಿಳಿಸಿದಳು . ಕುಮಾರಿ ಪ್ರತಿಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.